ಜಯ ಜಯವೆನ್ನಿರೊ ಶ್ರೀ ಗುರುವಿಗೆ
ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ
ಗುಹ್ಯಗುರುತ ದೋರುವ ಗುರುಮಣಿಗೆ
ಮಾಯರಹಿತ ನಿರಾಳ ನಿರ್ವಾಣೆಗೆ
ತ್ರೈಲೋಕ್ಯವಂದಿತ ವರಮುನಿಗೆ
ದಯಯುಳ್ಳ ಶ್ರೀ ದೇವಶಿಖಾಮಣಿಗೆ 1
ತ್ರಿಗುಣಾತೀತ ತಾರಕ ನಿರಂಜನಗೆ
ಝಗಿ ಝಗಿಸುವ ಜಗನ್ಮೋಹನಗೆ
ಜಾಗಿಸುವ ಜಗತ್ರಯ ಜೀವನಿಗೆ
ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2
ಜಯ ಜಯವೆನ್ನಿರೊ ಗುರುಮೂರ್ತಿಗೆ
ಇಹಪರ ಪೂರ್ಣ ಪರಂಜ್ಯೋತಿಗೆ
ಬಾಹ್ಯಾಂತ್ರ ಭಾಸುವ ಶ್ರೀಪತಿಗೆ
ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3