ಆತ್ಮನಿವೇದನೆ
ಅಚಿಂತ್ಯಾದ್ಭುತ ಮಹಿಮ ಈ ಸಚರಾಚರದೊಳು
ಪ್ರಚುರನಾಗಿಹೆ ದೇವಾ ಮುಚುಕುಂದವರದಾ ಪ
ಅಚಲಭಕುತಿಯು ನಿನ್ನ ಚರಣದಿ
ಕಿಂಚಿತಾದರೂ ಪ್ರಚುರಮಾಡಿಸು
ಅತಿಚಂಚಲನು ಬಲು ವಂಚಕನು ನಾ ಅನು-
ಚಿತೋಚಿತ ಕರ್ಮವರಿಯೆನೋ ಅ.ಪ
ವಿಪಿನವಾಸದಿ ಎನಗೆ ವಿಪರೀತವನು ತೋರಿ
ಅಪರಾಧವೆಣಿಸದೆ ಪಾಲಿಸಿದೇ
ಕೃಪಣವತ್ಸಲ ನೀನೇ ಕೃಪೆಮಾಡಿ ಸ್ವಪನದಿ
ಅಪರಿಮಿತದ ವಿಶ್ವರೂಪವ ನೀ ತೋರ್ದೆ
ಅಪರಾಧಿ ನಾನಹುದೋ ಸ್ವಾಮಿ ಅಪವರ್ಗಪ್ರದನು ನೀನು
ಸಫಲಗೊಳಿಸಿದೆ ಎನ್ನ ಮನದನು-
ತಾಪವನು ಪರಿಹರಿಸಿ ಕಾಯ್ದೆ
ನಿನ್ನಡಿದಾವರೆಯ ನಂಬಿದೆನೋ
ಶ್ರೀ ಪರಮಹಂಸರಿಂದ ನುಡಿಸಿದ ರಹಸ್ಯಗಳು ಅದುಏನೋ
ಶ್ರೀ ಪುರುಷೋತ್ತಮನೆ ನೀನೆನ್ನಭಯಹಸ್ತದಿ
ಕರೆದ ಪರಿಯೇನೋ ಅದನೊಂದನರಿಯೆನೊ
ಈಪರಿಯ ಕರಚರಣದಲಿ ಚರಿಸಿದ
ಅನುಪಮ ಕ್ರಿಯೆಯ ನೋಡಿ ಮನದೊಳು
ಸುಪುತಕಾಲದಿ ತೈಜಸನೆ ನೀನೆನ್ನ
ಪುಳುಕಾಂಕಿತನ ಮಾಡಿದೇ 1
ಅಮಿತ ಕಾರ್ಯವನೆಸಗೀ
ಬಲು ಯಾತನೆಗೊಂಡು ಇಳೆಯೊಳು ಬಾಳೀ ದು-
ರ್ಬಲನಾಗಿದ್ದರು ಎನ್ನ ಛಲವು ತೊಲಗಲಿಲ್ಲ
ಜಲಜನಾಭನೆ ನೀನೆ ಕರುಣಿಸಿ ಸಲಹದಿರ್ದೊಡೆ ಪ್ರ-
ಬಲರೆನ್ನನು ಕವಿದು ಮನಚಂಚಲವ ಪುಟ್ಟಿಸೀ
ವಲೀಮುಖನಂತಾಡಿಸುವರೋ
ಕಲಿಮಲವನ್ನೆ ಪರಿಹರಿಸುವುದೋ
ಮನದಿ ಎಡೆಯು ದುರ್ಲಭವೋ
ಒಲುಮೆಯಿಂದಲಿ ಸಾಧಿಸಲು ಎಲ್ಲೆಡೆಯ ಸರ್ವತಂತ್ರ
ಸ್ವಾತಂತ್ರ್ಯ ನಿನ್ನದೋ ಭೋ ಜಗತ್ಪತೇ
ಕಾಲನಾಮಕ ನೀನೆ ಆಪತ್ಕಾಲಬಾಂಧವವೆಂದು ನಂಬಿದೆ
ಜಾಲಮಾಡದೆ ಎನ್ನ ಜೀವಿತದಲ್ಪಕಾಲದಿ ಕರುಣೆ ತೋರೈ2
ತುಷ್ಟನೆಂತಾಗುವೆಯೊ ಭ್ರಷ್ಟಪಾತಕಿ ನಾನು
ಕಷ್ಟವಲ್ಲವೋ ನಿನಗೆ ಶ್ರೇಷ್ಟಮೂರುತಿಯೆ
ಇಷ್ಟಮೂರುತಿಯೆಂದು ಇಷ್ಟು ನುಡಿದೆನೊ
ಸಾಷ್ಟಾಂಗ ನಿನ್ನೊಳು ಇರಲೋ ಇಷ್ಟೇ ಎನ್ನದೊ ದೇವಾ
ಕಷ್ಟಕಷ್ಟವೊ ಬೆಟ್ಟದೊಡೆಯ
ಕೊಟ್ಟುದಷ್ಟು ನಿನ್ನದಯ್ಯಾ ಇಷ್ಟೆಬೇಡುವೆ ಎನಗೆ ಎ-
ಳ್ಳಷ್ಟು ಭಕುತಿಯ ಕೊಡದಿರುವೆಯಾ
ಸೃಷ್ಟಿಸ್ಥಿತಿಲಯನಿಯಮನಾದ್ಯಷ್ಟ
ಕತೃತ್ವವು ನಿನ್ನದೊ ಅಷ್ಟಾಂಗಯೋಗದಿ
ತುಷ್ಟಪಡಿಸೆ ತನುಮನೋಧಿಷ್ಟಾನವು ನಿನ್ನದೊ
ಶ್ರೇಷ್ಠಮೂರುತಿ ಸುಲಭದಲಿ ನೀ
ದೃಷ್ಟಿಗೋಚರವಾಗುವುದು ಇನ್ನೆಂತೋ ಹಾ ಕಷ್ಟಕಷ್ಟವೋ
ಸೃಷ್ಟಿಯೊಳು ನಾನೆಷ್ಟರವ ನಿನ್ನಿಷ್ಟಬಂದಂತಾಗಲಿ ಭವ-
ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲ 3