ಈ ಭಾಗ್ಯವೆ ನಿನ್ನದೊ ವರ ಭೋಗಿಶಯನಾ ಪ
ಸೌಭಾಗ್ಯವೇ ನಿನ್ನ ಮಹಿಮೆ ತಿಳಿಯುವ ಯೋಗಅ.ಪ
ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳಿಲ್ಲ
ನೀನೆಲ್ಲವನು ಬಲ್ಲೆ ನಿನ್ನತಿಳಿಯಗೊಡದೆ
ಹೀನಮಾನವ ನಾನು ನಿನ್ನನವರತ ಮರೆತರು ನೀ
ಎನ್ನ ಮರೆಯದಲೆ ಎನ್ನೊಳಗೆ ಇಹೆ ಎಂಬ 1
ನಿಲ್ಲಿಸಲು ನಿಲ್ಲುವೆನು ಮಲಗಿಸಲು ಮಲಗುವೆನು
ತಿಳಿಸಿದರೆ ನಾ ತಿಳಿವೆ ತಿಳುವಳಿಕೆ ನೀನೆ
ತಿಳಿಯಗೊಡಿಸೋಎನ್ನಕ್ರಿಯೆಗಳನು ದೇಹದ
ನೆಳಲಂತೆ ನಿನಗೆ ನಾನಿಹೆನಯ್ಯ ದೇವಾ 2
ಈ ಜಗತ್ತಿನೊಳಗೆಲ್ಲ ಪೂಜ್ಯಪೂಜಕ ಪೂಜ್ಯ
ಪೂಜೋಪಕರಣದೊಳು ನೀನೆ ನಿಂತು
ಮೂರ್ಜಗತ್ಪತಿಯೆ ನಿನ್ನನರ್ಚಿಸುವ ಭಜಕರಿಗೆ
ನೈಜಸುಖ ವ್ಯಕ್ತಿಯನು ಮಾಡುತಲಿ ಪೊರೆವೇ 3
ನೀರು ತೃಣವನು ಕೊಡಲು ಹರುಷದಿಂದಲಿ ಗೋವು
ಕ್ಷೀರವನು ಕರೆದು ಜನರ ಪೊರೆವಂತೆ
ಸೂರಿಗಳು ಮಾಳ್ವ ಅಪರಾಧಗಳೆಣಿಸದಲೆ
ಕರುಣದಿಂದಲಿ ಅವರ ಪೊರೆವ ಶ್ರೀಹರಿಯೆ4
ಪನ್ನಗಾಚಲನಿಲಯ ನೀನೆ ಎನ್ನೊಳಗಿರಲು
ಬನ್ನಪಡಲ್ಯಾತಕೆ ಚಿನ್ಮಯರೂಪ
ಎನ್ನಂಥಜೀವರಿನ್ನೆಷ್ಟೋ ಬ್ರಹ್ಮಾಂಡದೊಳು
ಘನ್ನಭಕುತಿಯನೀಡೋ ಶ್ರೀಉರಗಾದ್ರಿವಾಸವಿಠಲ 5