ಇರಬಾರದೊ ಬಡವ ಜಗತ್ತಿನೊಳಗೆ |
ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ
ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು |
ಬಿಡದೆ ಜನ ಪೇಳುವುದು ಸಿದ್ಧವಯ್ಯಾ |
ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು |
ಒಡವೆ ಸಂಪಾದಿಸಲು ಅಪಹರಿಸಿದ ನೋಡು 1
ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು |
ಹಣದಾಸಿಯಿಂದ ನಾ ಘಳಿಸಿದ್ದೆನೊ |
ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ |
ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ2
ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ |
ಸರಿಬಂದ ಕಾರ್ಯಮಾಡುವರಲ್ಲದೇ |
ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ |
ಮರಳೆ ಮಾತಾಡಿದರೆ ಅಪರಾಧ ಹೊರಿಸುವರು 3