ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ
ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ.
ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ವರ ವಾಣಿರಮಣಗೆ ಶರಣೆಂಬೆ ಸುವ್ವಿ
ವರ ವಾಣಿರಮಣಗೆ ಶರಣೆಂದು ಪೇಳಿದ
ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ 1
¥ಕ್ಕಿವಾಹನ್ನ ಜಗಕ್ಕೆ ಮೋಹನ್ನ
ರಕ್ಕಸದಾಹನ್ನನಿವ ಸುವ್ವಿ
ರಕ್ಕಸದಾಹನ್ನನಿವ ತನ್ನ ಮರೆ-
ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ 2
ಯಶೋದೆಯ ಕಂದ ತನ್ನ ವಿಷವನುಣ್ಣೆಂದ
ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ
ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ
ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ 3
ಶಕಟಾಸುರನ್ನ ಮೆಟ್ಟಿ ಕೊಂದ ಬಲು
ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ
ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ-
ಸ್ತಕದಮೇಲೆ ನಲಿವುತ ನಿಂದ ಸುವ್ವಿ4
ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು
ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ 5
ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ
ಭೃತ್ಯರಿಗೊಲಿದು ವರವಿತ್ತ ಸುವ್ವಿ
ಭೃತ್ಯರಿಗೊಲಿದು ವರವಿತ್ತ ತನ್ನ
ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ 6
ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ
[ಕೊಂದಪೆ]ನೆಂದು ಬಂದ ಬಕನ ಸುವ್ವಿ
[ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ
ಕೊಂದು ಬಿಸುಟಾನೆ ಸುವ್ವಿ 7
ಕಲ್ಪತರುವಂತೆ ನಮ್ಮ ತನ್ನಧರಿಂದ
ಕೊಳಲನೂದುವ ಚೆಲುವಗೆ ಸುವ್ವಿ
ಕೊಳಲನೂದುವ ಚೆಲುವ ಗಾನಲೋಲ ಗೋ-
ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ 8
ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ
ಮಂಗಳ ವಿಲಾಸವನು [ರಚಿಸಿದ]ಸುವ್ವಿ
ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ
ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ 9
ಮಧುರೆಗೆ ಪೋಗಿ ಮಲ್ಲರಸುವ ನೀಗಿ
ಮದಾಂಧ ಮಾವನ್ನ ಮಡುಹಿದ ಸುವ್ವಿ
ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ
ಮುದದಿ ತನ್ನವರ ಮುದ್ದಿಸಿದ ಸುವ್ವಿ 10
ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ
ದುರ್ಮನವ ಬಿಡದೆ ಹರಿಯಲಿಡು ಸುವ್ವಿ
ದುರ್ಮನವ ಬಿಡದೆ ಹರಿಯಲಿಡು ಮನವ
ಕಾಮಿನಿಯೊಳಾಡಿ ಕೆಡಬೇಡ ಸುವ್ವಿ 11
ದುರುಳರ ನೋಡಿ ದೂರಕ್ಕೋಡು ಹರಿ-
ಶರಣಡಿಗೆ ಪೊಡಮಡು ಸುವ್ವಿ
ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು-
ಚರಿತವ ಪಾಡುವರೊಳಗಾಡು ಸುವ್ವಿ 12
ಏರಲರಿಯದವ ಮರನೇರಿ ಬಿದ್ದು ಸಾವಂತೆ
ನೀರ ಮೀನುಗಳು ಕರಗುವಂತೆ ಸುವ್ವಿ
ನೀರ ಮೀನುಗಳು ಕರಗುವಂತೆ ಮನುಜ ನೀ
ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ 13
ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ
ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ
ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ
ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ 14
ದುರುಳ ಕೀಚಕ ಕೆಟ್ಟ
ಪರಧನಕೆ ಮರುಳಾಗಿ ಕುರುರಾಯ ಸುವ್ವಿ
ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು
ಒರೆವ ಭಾರತವ ನಿರುತ ಕೇಳು ಸುವ್ವಿ 15
ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ
ಭೇದವಿಲ್ಲವೆಂಬ ಮತದಲ್ಲಿ ಸುವ್ವಿ
ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ
ಗೆದ್ದಾನೆಂತು ಬಿದ್ದಾನೆಂತು ಸುವ್ವಿ 16
ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು
ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ
ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು
ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ 17
ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ-
ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ-
ರ್ವತ್ರ ಜೀವ ಭೇದವುಂಟೆಂಬುವಗೆ ಭೇದ
ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ 18
ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು
ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ
ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ
ಪ್ರತ್ಯೇಕ ಜೀವರ ಇರವು ಸುವ್ವಿ 19
ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ-
ನ್ನರ್ಥವ ತಾ ಕಾಣಲರಿಯನು ಸುವ್ವಿ ತ-
ನ್ನರ್ಥವ ತಾ ಕಾಣಲರಿಯನು ಅದರಿಂದ ನಾ-
ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ 20
ಬೊಮ್ಮ ಮಿಥ್ಯವಲ್ಲವೋ ನಿನ್ನ
ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ
ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ-
ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ 21
ಸತ್ತ ಪೆಣನುಂಟು ಸಾಯದ ವಸ್ತುಂಟು
ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ
ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ
[ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ 22
ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ-
ಬರ್ಥ ತಾ ಕೂಡಲರಿಯದು ಸುವ್ವಿ ಎಂ-
ಬರ್ಥ ತಾ ಕೂಡಲರಿಯದು ಅದರಿಂದ
ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ23
ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ
ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ
ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ
ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ 24
ಇಲ್ಲ ಜಗವೆಂಬುದನು ಈಗ ಕಂಡದ ಕಾರಣ
ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ
ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ
[ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ 25
ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ
ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ
ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ
ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ 26
ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ
ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ
ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ
ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ 27
ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ
ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ
ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ-
ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ 28
ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ-
ವೇಕಿಗಳೆಲ್ಲ ಬಲ್ಲರು ಸುವ್ವಿ ವಿ-
ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ
ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ 29
ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ-
ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ-
ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ
ವೈಕುಂಠದ ವಾಸನೆ ಲೇಸು ಸುವ್ವಿ 30
ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ
ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ
ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು
ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ 31
ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ
ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ
ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ-
ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ 32
ನಗರ ಕೃಷ್ಣಗೆ
ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ
ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ
ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ34
ಇಂತು ಹಯವದನ ನಿಶ್ಚಿಂತ ಜಗತ್ಕಾಂತ
ಸಂತರನು ಸದಾ ಸಲಹುವ ಸುವ್ವಿ
ಸಂತರನು ಸದಾ ಸಲಹುವ ಮಾರಾಂತರ ಕೃ-
ತಾಂತನ ಬಳಿಗೆ ಕಳುಹುವ ಸುವ್ವಿ 35