ನಿನ್ನ ಕ್ಲೇಶವ ಕೇಳೆ ಎನಗೆ ಮರುಕಪ
ಎನ್ನ ಕ್ಲೇಶವ ನಿನಗೆ ತಿಳಿಸಬಹುದೆ ದೇವ ಅ.ಪ
ಹದಿನಾಲ್ಕು ಲೋಕಗಳ ಹುಡುಗತನದಲಿ ಪಡೆದು
ಅದಕೆಲ್ಲ ಅನ್ನವೀಯುವ ಚಿಂತೆಯು
ಹದಿನಾಲ್ಕು ಲೋಕಗಳ ಸರ್ವಕರ್ಮಗಳಿಗೂ
ಹಗಲಿರುಳು ಪ್ರೇರಣೆಯ ಮಾಡುವಾತಂಕ 1
ಹಿರಿಮಗನದೊಂದುಸಿರ ತರಿದರೆಂಬಾತಂಕ
ಕಿರಿಮಗನ ದೇಹ ಪೊಸಕಿದ ಚಿಂತೆಯು
ಹರನು ಮೊಮ್ಮಗ ಹಾಲಾಹಲವ ಕುಡಿಯುತ ಹಲ್ಲು
ಕಿರಿಯುವಾತಂಕಕ್ಕೆ ಹರವು ತೆರವಿಲ್ಲ 2
ಚಂಚಲಳು ಸತಿಯೆಂದು ಹೊಂಚು ಕಾಯುವ ಚಿಂತೆ
ಮಂಚದಲಿ ಘಟಸರ್ಪ ವಿಷದ ಚಿಂತೆ
ಸಂಚಿತಾಗಮ ಪ್ರಾರಭ್ಧಗಳನಳಿಸುವಗೆ
ವಂಚಕರು ಏನು ಮಾಡುವರೆಂಬ ಚಿಂತೆ 3
ಹಲವು ವಿಧ ವೇಷಗಳ ತಾಳಿ ಜಗಂಗಳಲಿ ನೀ
ತಲೆಯ ಮರಿಸಿಕೊಂಡರೇನು ಫಲವೊ
ಬಳಸಿ ಹುಡುಕಿ ಗೂಢಚಾರಿ ಯೋಗಿಯು ನಿನ್ನ
ತಿಳಿದು ಬೆಳಕಿಗೆ ತರುವ ಮರೆಮಾಚಲೇಕೊ 4
ತಾಪತ್ರಯ ತಳೆಯೆ ಗೋಪನಲಿ ಪುಟ್ಟಿದರು
ಗೋಪಿಯರ ಸಾಸಿರದ ಗೋಳು ನಿನಗೆ
ಭೂಪ ದಶರಥನ ಮಗನಾಗಿ ಪುಟ್ಟಿದರಯ್ಯೊ
ಪಾಪ ಸತಿಯಳ ಕಳೆದುಕೊಂಡ ಬಲುಚಿಂತೆ 5
ನಿನ್ನ ಬೇಡುವುದಿಲ್ಲ ನಿನ್ನ ಕಾಡುವುದಿಲ್ಲ
ನಿನ್ನ ನೋಡಲು ಎನಗೆ ಬೇಸರವು ಜಗಕೆ
ನಿನ್ನ ಚಿಂತೆಯು ಮನ ಪ್ರಸನ್ನತೆ ನೀಡುವುದು
ಇನ್ನೇನು ನಿನಗೆ ಚಿಂತೆಯೊ ತಿಳಿಸಿ ಪೊರೆಯೊ 6