ಸಾಧಿಸಿ ಪಡೆದಿದ್ದೀ ನರಜನುಮ ಸಂ
ಪಾದಿಸಿ ಕೊಳ್ಳೆಲೆ ಹರಿನಾಮ ಪ
ಪೋದಬಳಿಕ ಇಂಥ ಮಹಜನುಮ ಮತ್ತೆ
ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ
ಮಡದಿಮಕ್ಕಳೆಂಬ ಒಣಭ್ರಾಂತಿ ನಿನ
ಗ್ಹಿಡಿದಿದೆ ಮಾಯದ ಘನಚಿಂತಿ
ಒಡೆದು ತೋರುವ ಜಗಕ್ಷಣ ಸಂತಿ ಇದು
ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1
ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ
ಸತ್ತುಹುಟ್ಟುತ ಬಹು ಬಳಲುವ್ಯಲೇ
ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ
ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2
ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ
ತಾಳುತ ಪಡೆದಿದ್ದಿ ಬಲುಶಿಕ್ಷೆ
ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ
ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3