ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ
ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ
ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ
ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ 1
ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ
ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ 2
ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ
ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3
ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ
ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ 4
ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ
ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ 5
ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ
ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ 6
ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ
ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ 7
ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ
ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ 8
ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ
ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ 9
ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ
ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ10
ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ
ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11
ಧರಣಿಯೊಳುರುತರ ಮೆರೆಯುವ ಫಣಿಭೂ
ಧರದೊಳು ನಿರುತವು ಭಕ್ತರ
ಸಿರಿವಲ್ಲಭ ವರದ ವಿಠಲ ಕರುಣಾಕರ 12