(ಉಂಗುರ ಕಳೆದಾಗ ಮಾಡಿದ ಪ್ರಾರ್ಥನೆ)
ಬೇಡಿಕೊ ಮೂಢಾ ಬೇಡಿಕೊ
ಬೇಡಿಕೊ ಭಕ್ತವತ್ಸಲನಲ್ಲಿ ಭಕ್ತಿ
ಮಾಡು ಪೂಜೆಯನು ಯಥಾಮತಿ ಶಕ್ತಿ
ದೂಡುತ್ತ ದುರುಳರ ಕುಚಿತ್ತಯುಕ್ತಿ
ರೂಢಿವಳಗೆ ಸಂಗ್ರಹಿಸು ವಿರಕ್ತಿ ಪ.
ಲಾಭಾಲಾಭ ಜಯಾಪಜಂiÀiಗಳು
ಸ್ವಾಭಾÀವಿಕವಾಗಿ ಬಹ ಹಗಲಿರುಳು
ನಾ ಭಾಗಿ ವರದನ ಪದ ಪದ್ಮ ನೆರಳು
ನೀ ಭಜಿಸಿದ ಮೇಲೆ ಬಾಯೊಳು ಬೆರಳು 1
ಯತ್ನವಿಲ್ಲದೆ ಬಹ ನಷ್ಟಗಳಂತೆ
ರತ್ನ ಭಂಗಾರ ಸಿಕ್ಕುವುದ್ಯಾಕೆ ಚಿಂತೆ
ನೂತ್ನವಾದ ಮೋಹವನು ಬಿಡು ಭ್ರಾಂತೆ
ರತ್ನಗರ್ಭವ ನಂಬಿರುವುದೆ ನಿಶ್ಚಿಂತೆ 2
ಅರಿ ಮಿತ್ರೋದಾಸೀನರಿಲ್ಲವು ಹರಿಗೆ
ಸರಿಯಾಗಿ ನಡೆಸುವ ಸರ್ವ ಜೀವರಿಗೆ
ಪರ ವಸ್ತು ನೀನೆಂದು ಸೇವೆ ಮಾಳ್ಪರಿಗೆ
ಸುರ ವೃಕ್ಷದಂತೆ ಕಾರಣವಾಹ ಸಿರಿಗೆ 3
ಋಣವಿಲ್ಲದೆ ವಸ್ತು ಕ್ಷಣವಾದರಿರದು
ಉಣುವ ಭೋಗಗಳೆಂದು ತಪ್ಪವು ನೆರದು
ಅಣು ಮಹತ್ತುಗಳಂತರಾತ್ಮನ ಬಿರುದು
ಗಣನೆ ಮಾಳ್ಪರ ಕೂಡಿ ನೆನೆ ಮನವರಿದು 4
ಆಶಾ ಪಾಶದಿ ಸಿಕ್ಕಿ ಕೆಡದಿರು ವ್ಯರ್ಥ
ಶ್ರೀಶನ ನೆನೆವುದೆ ಸಕಲ ವೇದಾರ್ಥ
ಶೇಷಗಿರೀಶನು ಸತ್ಪುರುಷಾರ್ಥ
ದಾಸಗೆ ತಾನಾಗಿ ಕೊಡಲು ಸಮರ್ಥ5