ಪ್ರಸನ್ನ ಶ್ರೀ ಬುದ್ಧ
ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ
ಅನುಪಮಾದ್ಭುತ ಶಿಶುರೂಪ ನಿರವಧಿಕ
ಅಮಿತ ಕಲ್ಯಾಣಗುಣಧಾಮ
ಬುದ್ಧ ಶರಣು ಮಾಂಪಾಹಿ ಪ
ಮಾಧವ ಗೋವಿಂದ
ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ
ಈಶ ವಾಮನ ಶ್ರೀಧರ ಹೃಷಿಕೇಶ
ಪದ್ಮನಾಭ ದಾಮೋದರ1
ವಾಸುದೇವ ಪ್ರದ್ಯುಮ್ನ ನಮೋ
ಅನಿರುದ್ಧ ಪುರುಷೋತ್ತಮ
ಅಧೋಕ್ಷಜ ನರಸಿಂಹ ಅಚ್ಯುತ
ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2
ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು
ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ
ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ
ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3
ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು
ಸರ್ವ ಈ ಹದಿನಾಲ್ಕು ಭುವನಂಗಳು
ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು
ಸರ್ವದಾ ಅಚಿತ್ ವಸ್ತುಗಳಿಗೆ 4
ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು
ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ
ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ
ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5
ಜೀವನ ಸ್ವರೂಪಾನುಸಾರದಿ ಮೂರು ವಿಧವು
ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು
ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು
ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6
ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು
ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ
ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ
ಯಾವನೂ ಸ್ವೀಕರಿಸ ಎತ್ತಿ ಎಸೆವ 7
ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ -
ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು
ಶ್ರೀಪ ನಿನ್ನ ಪಾಲಸಾಗರತಟ ಬಂದು
ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8
ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ
ಸನ್ನುತ ಇವಗೆ
ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9
ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು
ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ
ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ
ಸುರರು ನಿನ್ನಲ್ಲಿ ಪೇಳಿದರು 10
ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ
ಬೆಳೆಯುವುದು ಮೋಹವು ದ್ವೇಷ ಪರಿಪಾಕ
ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ
ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11
ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ
ಧಾತ್ರಿಯಲಿ ಸೌದ್ಧೋದನ ಜಿನನೆಂದು
ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ
ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12
ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ
ದೇವವರೇಣ್ಯ ನೀ ಅಭಯವನಿತ್ತಿ
ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ
ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13
ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು
ಪೋಗಿ ನೀ ಆ ಮಗುವ ಮರೆಯಾಗಿಸಲು
ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ
ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14
ಇದನ್ನರಿಯದೇ ಜಿನಾದಿಗಳು ನಿನ್ನನ್ನೇ
ಜಾತವಾದ ತಮ್ಮ ಮಗುವೆಂದು ನೆನೆದು
ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ
ಮುದದಿ ಕೊಂಡಾಡಿದರು ಪುತ್ರೋತ್ಸವವ 15
ಕದಳೀ ತೆಂಗು ಪೂಗಿ ಮಾವು ತೋರಣವು
ವಾದ್ಯಂಗಳ ಅರ್ಭಟ ವೇದ ಘೋಷಗಳು
ದೈತ್ಯ ವಿದ್ವಾಂಸರ ವಾದ ಮೀಮಾಂಸವು
ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16
ಆಶ್ಚರ್ಯ ಏನಿದು ಹಸಿಮಗು ನಗುತಿದೆ
ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ
ಬುದ್ಧ ನಿನ್ನ ಹೆಸರೆಂದು
ಮೆಚ್ಚಲಾರೆನು ವೈದಿಕಕರ್ಮ ಎಂದಿ 17
ವೇದ ಅಪ್ರಾಮಣ್ಯ ಬೋಧಕವೆಂದು ತೋರುವ
ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು
ಬೋಧಿಸಿದ ಮೋಹಕ ಮಾತು ಜಿನಾದಿಗಳು
ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18
ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು
ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ
ಬಂದರು ಆ ಜಿನಾದಿಗಳಿಗೆ ಕಾಣಿಸುತ
ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19
ವೇದ ವಿರುದ್ಧ ಮಾತುಗಳಾಡುತ ನೀನು
ವೇದ ಅಪ್ರಾಮಣ್ಯ ವಾದಿಸುತ್ತಿ
ಸದೆದು ಹಾಕುವೆವು ಎಂದು ಕೂಗುತ್ತ
ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20
ಮೋದಮಯ ಶಿಶುರೂಪ ಅಚ್ಯುತನೇ ನೀನು
ಆ ದೇವತೆಗಳು ಪ್ರಯೋಗಿಸಿದ ಆಯುಧ
ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ
ಮಧುಸೂಧನ ವಿಷ್ಣು ಬರಲೀ ಅವ ಎಂದಿ 21
ಲೀಲಾ ವಿನೋದದಿ ಮತ್ತೊಂದು ರೂಪದಿ ನೀ
ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ
ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು
ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22
ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ
ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ
ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ
ಸುರರು ತಮ್ಮ ತಮ್ಮ ಸ್ಥಳಕೆ 23
ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ
ಎಲ್ಲ ದೇವತೆಗಳು ಸೋತು ಓಡಿ ಹೋದರು
ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ
ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24
ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ
ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು
ಬುದ್ಧ ಆ ಜಿನಾದಿ ದೈತ್ಯರ ಸಮೂಹವು
ತಬ್ಬಿಕೊಂಡರು ತಮಸ್ ಸಾಧನ ಮತಿಯ 25
ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ
ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ
ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು
ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26
ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು
ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು
ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ
ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27
ಅದೋಷನು ನೀನು ದೋಷ ಅಭಾವವಾನ್
ಸದಾ ನೀನು ಭಿನ್ನನು ಜಡ ಜೀವರಿಂದ
ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ
ಆದುದರಿಂ ಅ ಎಂದು ನೀನೇವೇ ಜÉ್ಞೀಯ 28
ಭವ್ಯವಾಗಿರುವುದು 'ಅ' ಯಿಂದ ಜಗತ್ತು
ಭವ್ಯ ಎಂದರೆ ಉತ್ಪಾದ್ಯ ಎಂಬುವುದು
ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ
ಅಭಾವವೆಂದಿ ವಿಭುವೇ ಸತ್ಯಜ್ಞಾನ 29
ಕಾಲ ಅವಯವ ಕ್ಷಣಕ್ಕೆ
ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ
ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್
ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30
ಶಂ ಎಂದರೆ ಸುಖವು ಉ ಉತ್ತಮತ್ವವು
ಶಂ ಸಹ ಉ ಸೇರಿ ಶೂ ಆಯಿತು
ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ
ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31
ಶೂನ್ಯ ಎಂಬುವರು
ಜ್ಞಾನವಂತರು ಹೀಗೆ ವಿಗ್ರಹ ಮಾಡುವರು
ಆನಂದಮಯನಾದ ಅನುತ್ತಮೋತ್ತಮ ನಿನ್ನ
ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32
ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ
ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ
ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33
ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ
ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ
ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ
ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34
ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ
ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ
ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ
ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35
ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ
ಇತಿಹಾಸ ಪುರಾಣಾದಿಗಳ ನಮಗಿತ್ತ
ವೇದವ್ಯಾಸ ಸುಹೃತ್ ಬುದ್ಧನು ನೀನೇವೇ
ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36
ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ
ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ
ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ
ಬುದ್ಧಾವತಾರ ಮೋದಮಯ ಕರುಣಾಳು 37
-ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -