ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ