ಆರು ಪೇಳಿದರೊ ಜೀವಾ ನಿನಗಾರು ಪೇಳಿದರೋ ಪ
ಆರು ಪೇಳಿದರೋ ಈ ಸೋರುವ ಮನೆಯೊಳು
ಇರುವುದು ಒಳಿತಲ್ಲಾ ತೆರಳುವುದುಚಿತನೇ ಅ.ಪ.
ದುಷ್ಟರಿರುವರೋ ಈ ಗ್ರಹದೊಳು
ಕಟ್ಟಿ ಸುಲಿಯುವರೋ
ಇಟ್ಟಿದ್ದ ಅನ್ನದಿ ಕೆಟ್ಟ ಕ್ರಿಮಿಗಳುಂಟು
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬಿದೋ ಅಲ್ಲಿ 1
ಛಾಯಾವೂ ಇಲ್ಲಾ ಈ ಮನೆಯೊಳು
ದಾಯಾವೂ ಇಲ್ಲಾ ಬಾಯ ಬಿಡಿಸುವರೋ
ಅನ್ಯಾಯ ಮಾಡುವರೋ ಉಪಾಯದಿಂದಲಿ ಬಿಟ್ಟು
ಹಯವದನನ ಶೇರೋ 2
ತರುಣರಿರುವರೋ ಈ ಮನೆಯೊಳು
ಮರುಳು ಮಾಡುವರೋ
ಪರುಮ ಹರುಷ ನಮ್ಮ ಹನುಮೇಶ ವಿಠಲನ
ನೆರೆ ನಂಬಿ ಸ್ಮರಿಸುವ ಸ್ಥಿರ ಪದವನು ಸೇರೊ 3