ಎಲ್ಲಾಪರಾಧವೈಯ್ಯಾ ಹರಿಪ್ರೀತಿ
ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾಪ.
ಸಾಧುಲಿಂಗವ ಧರಿಸಿ ವೇದ ವೇದಾಂತ ಸ-
ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ
ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು
ಓದಿದರು ಸರ್ವಶಾಸ್ತ್ರ
ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ
ಕೈದಿ ತಪಗೈದರು ಮಹಾದಾನಿಯಾದರು ವಿ-
ರಾಧವಧ ಪಂಡಿತನ ಪಾದಕರ್ಪಣ ವಿನಹ
ಬಾಧಿಸದೆ ಬಿಡದು ಜನ್ಮ 1
ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ-
ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ
ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು
ನರಕ ಸ್ವರ್ಗದ ಭ್ರಮಣವು
ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ
ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ
ಗರದಿ ತೇಲಾಡುವುದನರಿಯದತಿ ದುರ್ಮೋಹ
ಸೆರೆಯೊಳಗೆ ಬಿದ್ದ ಮೇಲೆ 2
ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ
ಸಾರ್ವಭೌಮಸುನಾಮ ಸಾಮಗಾನಪ್ರೇಮ
ದೂರ್ವಾದಳಶ್ಯಾಮ ದುರ್ಗಾರಮಣ ಜಗವ
ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ
ಕೊರ್ವನೆ ಹೃಷೀಕೇಶ ಕೇಶವ ದೈತ್ಯ
ಪೂರ್ವಕವೆ ನಿರಪರಾಧ 3