ಬಾ ಉರುಟಣೆಗೆ ಕಾಂತ ಪ್ರಿಯಕಾಂತ ಪ.
ಕರುಣವ ತೋರೋ ಕಮಲನಯನನೆ
ತರುಣಿಮಣಿಯು ನಾ ಕರೆವೆನು ರಮಣ ಅ.ಪ.
ವರ ಪನ್ನೀರಿಲಿ ಚರಣವ ತೊಳೆದು
ಅರಿಶಿಣ ಹಚ್ಚುವೆ ಕಾಂತ ನಾ
ವರ ಲಲಾಟಕೆ ಹರುಷದಿ ಕುಂಕುಮ
ತಿಲಕವ ತಿದ್ದುವೆ ರಮಣ 1
ಅತ್ತರು ಪನ್ನೀರಿನ ಗಂಧವನು
ಶಿಸ್ತಿಲಿ ಪೂಸುತಲೀಗ
ವಿಸ್ತಾರವಾದ ಮಲ್ಲಿಗೆ ಮಾಲೆಯ
ಚಿತ್ತಜನಯ್ಯ ಹಾಕುವೆನು ಪ್ರಿಯ 2
ಬಿಳಿಯೆಲೆ ಅಡಿಕೆ ಚೆಲುವಿನ ಸುಣ್ಣ
ನಲಿದು ಕೊಡುವೆ ಬಾ ಕಾಂತ
ಛಲವ್ಯಾಕೆನ್ನೊಳು ಶ್ರೀ ಶ್ರೀನಿವಾಸ
ಒಲುವಿನಲಿ ಬಾ ಬೇಗ ರಮಣ 3