ಮುನಿಯುವರೇ ಕೃಷ್ಣಾ ಮುನಿಯುವರೆ ಪ
ದಣಿಸಲಾಗದೊ ನಿನ್ನ ನೆನೆವ ಭಕುತರೊಳು ಅ.ಪ
ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ
ದಣಿಸಿ ಕುಣಿಸುವರೊ ಮೌನದಿಂದಲಿ ನಾ
ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆ
ಕೆಣಕಿದವರ ನೀ ಕ್ಷಣದಿ ಕಾಪಾಡಿದೆ 1
ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆ
ಶಿಲೆಯನೊತ್ತಿ ಸುಶೀಲೆಯ ಪೊರೆದೆ
ಜಲಧಿಶಯನಾ ನೀ ರಥಕೆ ಸಾರಥಿಯಾದೆ
ಛಲವೇತಕೆನ್ನೊಳು ನೀನೆ ಗತಿ ಎಂದರೆ2
ಎಂಜಲಾಸೆಗೆ ಸೋತು ಶಬರಿಯ ಪೊರೆದೆ
ಸಂಜೆ ಹಗಲೆನ್ನದೆ ಎಂಜಲ ಬಳಿದೆ
ಅಂಜದೆ ಅಜಾಮಿಳಗೊಲಿದೆಯೋದೇವ
ಅಂಜೆನೊ ಎಂದಿಗೂ ಕುಂಜರವರದಾ 3
ಶಪಥಮಾಡಿ ನಿನ್ನ ಪಂಥವ ಕೆಡಿಸಲು
ಕುಪಿತನಾಗಲಿಲ್ಲ ಕುರುಪಿತಾಮಹನೊಳು
ಆಪ್ತನಿಮಿತ್ತಬಾಂಧವನೆಂದು ನಿನ್ನ
ಪ್ರಾಪ್ತಿಯ ಬೇಡಲು ಬಂದುದಕೆ ಈಗ 4
ಪರಿ ಅಂಕಿತ ಪೇಳದೆ
ಬಿಂಕತನದಲಿ ಕಾಲವ ಕಳೆದೆ
ಶಂಕರನುತ ಶ್ರೀ ವೇಂಕಟೇಶ ನಿನ್ನ
ಕಿಂಕರನೆನಿಸೆನ್ನ ಸಂಕಟ ಹರಿಸೂ5