ರಾಗ :ಸಾರಂಗ ಅಷ್ಟತಾಳ
ಸಲಹಿಕೊಂಬವರಿಲ್ಲವೋ ವೆಂಕಟರಾಯ
ಗೆಲುವ ಪರಿಯ ಕಾಣೆನು ಪ
ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ
ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ
ಅರಳಿಯ ವೃಕ್ಷದೊಳು ಆನೆಯ ತಂದು
ಸ್ಥಿರವಾಗಿ ಕಟ್ಟಿದಂತೆ
ದುರುಳರು ಬಂದೆನ್ನ ಕೊರಳು ಕೊಯ್ದೀಗ
ಪರಿ ಇರವ ಕಾಣುತ ಮುಂದೆ 1
ಮಾಡಿದ ಉಪಕಾರವ ಮರೆತು ಮುಂದೆ
ಕೇಡನು ನೆನೆವರಿಗೆ
ನೋಡಿದೆ ಯಾತಕೆ ಮಾಡದೆ ಶಿಕ್ಷೆಯ
ಆಡಿದೆ ನಿನ್ನೊಳು ಬೇಡ ಇನ್ನವರೊಳು 2
ವಾರಿಧಿ ತೀರದಲಿ ನೆಲ್ಲನು ತಂದು
ಹಾರಿಸಿ ಬಿತ್ತಿದಂತೆ
ಭವ ಘೋರ ಕಾನನದೊಳು
ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ 3
ಒದಗಿದ ನ್ಯಾಯದಲಿ ಇದಿರು ಬಂದು
ಕದನವ ಕಟ್ಟುತಲೆ
ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ
ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ 4
ನೊಂದೆನು ಬಹಳವಾಗಿ ಈ ಭವದ
ಸಿಂಧುವ ದಾಟಿ ಹೋಗಿ
ಚಂದದಿ ನಿನ್ನಯ ಚರಣಾರವಿಂದವ
ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ 5