ಮನರಥದಿಂದಲಿ ಘನರಥಕೀಗಲೆ ಬೇಗನೆ ಬಾರೊ ಪ.
ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ
ದನುಜದಲ್ಲಣ ಬೇಗ ಬಾರೋ ಕೃಷ್ಣ ಅ.ಪ.
ಮುತ್ತಿನ ತೋರಣ ಸುತ್ತು ಛತ್ತರಿಗೆಯು ಬೇಗನೆ ಬಾರೊ
ಸಿರಿ ಸಹ ಬೇಗನೆ ಬಾರೊ
ಉತ್ತಮ ಭಕ್ತರು ಎತ್ತಿ ಕೈ ಕರೆವರು ಬೇಗನೆ ಬಾರೊ
ನಿತ್ಯ ಮಂಗಳ ನಿನ್ನ ಉತ್ತಮ ರೂಪವ
ಚಿತ್ತದಿ ತೋರುತ ಸತ್ಯ ಸಂಕಲ್ಪನೆ 1
ಗಡಗಡ ನಡೆಯುವ ಘನರಥದಲಿ ನಿಂದು ಬೇಗನೆ ಬಾರೊ
ಎಡಬಲದಲಿ ಶ್ರೀ ಭೂಮಿಯರೊಡಗೂಡಿ ಬೇಗನೆ ಬಾರೊ
ಧಡಧಡ ನಡೆಯುತ ದೈತ್ಯದಲ್ಲಣನೆ ಬೇಗನೆ ಬಾರೊ
ನುಡಿಸುವ ವಾದ್ಯಗಳ್ ಪಿಡಿದಿಹ ಚಾಮರ
ಕಡೆಗಣ್ಣೊಳು ಭಕ್ತರನೀಕ್ಷಿಸುತಲಿ 2
ನಾರದ ತುಂಬುರ ನಾಟ್ಯವನಾಡ್ವರು ಬೇಗನೆ ಬಾರೊ
ಬಾರಿ ಬಾರಿಗೆ ಭಕ್ತರು ನುತಿಗೈವರು ಬೇಗನೆ ಬಾರೊ
ವಾರಿಜಾಸನ ವಂದ್ಯ ಶ್ರೀನಿವಾಸ ದೊರಿ ಬೇಗನೆ ಬಾರೊ
ತೋರುತ ರೂಪವ ಬೀರುತ ಕರುಣವ
ಮಾರಜನಕ ಅಪಾರ ಮಹಿಮನೆ 3
ವಂದಿಸಿ ಕರೆವರೊ ನಿಂದು ಭಕ್ತರೆಲ್ಲ ಬೇಗನೆ ಬಾರೊ
ಇಂದಿರೆಯರಸನೆ ಮಂದರೋದ್ಧರ ಕೃಷ್ಣ ಬೇಗನೆ ಬಾರೊ
ಇಂದು ಸ್ಥಿರವಾರ ಸ್ಥಿರವಾಗಿ ಸಲಹಲು ಬೇಗನೆ ಬಾರೊ
ಹಿಂದೆ ಮುಂದೆ ಭಕ್ತ ಸಂದಣಿಯೊಳು ಗುರು
ವೃಂದ ಬಿಂಬ ಮನ್ಮನ ಬಿಂಬನೆ ರಥಕೆ 4
ಅಪಾರ ಕರುಣದಿ ಭಕ್ತರ ಪೊರೆಯಲು ಬೇಗನೆ ಬಾರೊ
ಶ್ರೀಪತಿ ಶೇಷಾಚಲನಿಲಯನೆ ಹರಿ ಬೇಗನೆ ಬಾರೊ
ಗೋಪಾಲಕೃಷ್ಣವಿಠ್ಠಲನೆ ತ್ವರಿತದಿ ಬೇಗನೆ ಬಾರೊ
ಭೂಪರೈವರ ಕಾಯ್ದ ಗೋಪಕುವರ ಕೃಷ್ಣ
ಈ ಪರಿಯಿಂದಲಿ ಭಕ್ತರ ಪೊರೆಯಲು 5