ಕರುಣಾಲವಾಲ ಜಿಷ್ಣುಪರಿಪಾಲ
ವಿಷ್ಣು ವಿಶ್ವವ್ಯಾಪಿಸಕಲ ದೃಷ್ಟಾದೀಶ ಕೃಷ್ಣಲೋಲ ಪ.
ಪೊಳೆವ ಗರುಡ ಸ್ಕಂಧವೇರಿ ಘಳಿರನೆ ಪೋಗಿ
ಜಲಜವ ಹರಿಸೆ ದೈತ್ಯ ಬಲವಕೊಂಡು ಬಂದ ಮುರನ
ಥಳಥಳಿಪ ಚಕ್ರದಿಂದ ತಲೆಯ ಭೂಮಿಗಿಳಿಸಿ ಮೆರೆದ 1
ಧುರದಿ ಮಂತ್ರಿ ಸುತರ ತರಿದು ಕರಿಯನೇರಿ ಖತಿಯ ತಾಳ್ದ
ನರಕನನ್ನು ನಳಿನಾಂಬಕಿಯ ಕರದಿ ಭಂಗಿಸಿ
ಸರಸಿಜ ಸಂಭವದತ್ತ ವರದಿ ಸಕಲ ಸುರರ ಗೆಲಿದ
ಗರುವನನ್ನು ನಿಲಿಸಿ ಕ್ಷಣದಿ ಶಿರವ ಚಂಡನಾಡಿದವನೆ 2
ಧಾತ್ರಿದೇವಿ ಬಂದು ನಾನಾ ಸ್ತೋತ್ರ ಗೈಯೈ ಕರುಣದಿಂದ
ಪಾತ್ರಗೊಲಿದು ಸತ್ರಾಜಿತನ ಪುತ್ರಿ ಒಡಗೊಂಡು
ಸುತ್ರಾಮ ಮಂದಿರವನೈದಿ ಚಿತ್ರ ತಾಟಂಕಗಳ ದಿತಿಗೆ
ಪುತ್ರ ತಾನೆಂದಿತ್ತ ಶ್ರೀಕಳತ್ರ ನಿನ್ನ ನಂಬಿರುವೆನು 3
ಸೌಂದರ್ಯಸಾರೈಕ ನಿಲಯಾ ನಂದಬೋಧಾಧಾರಮೂರ್ತಿ
ಇಂದಿರಾವತಾರೆ ಭಾಮೆ ಎಂದ ನುಡಿ ಕೇಳಿ
ಮಂದಹಾಸದಿಂದ ನಗುತ ಮಂದವಾಯು ಸುಳಿವ ಸುರರ
ನಂದನದೊಳಿಂದುಕಿರಣ ಛಂದದೊಳಾನಂದಗೊಂಡ 4
ವಾರಿಜಾಕ್ಷಿಯೆಂದ ನುಡಿಗೆ ಧೀರತನವ ತೋರಿ ದೇವ
ಪಾರಿಜಾತ ವೃಕ್ಷವ ಸರ್ಪಾರಿ ಮೇಲಿರಿಸಿ
ಸಾರೆ ಸ್ವರ್ಗನಾಥ ಸ್ವಪರಿವಾರ ಸಹಿತ ತಡಿಯೆ ಗೆದ್ದು
ದ್ವಾರಾವತಿಗೆ ಪೋಗಿ ಮೆರದ ನೀರಜಾಕ್ಷ ವೆಂಕಟೇಶ 5