ಎನ್ನ ಸಲಹುದೋ ರಂಗಾ ಎನ್ನ ಸಲಹು|
ನಿನ್ನ ಚರಣ ಕಮಲದೋರಿ|
ಗಮನ ರಂಗಾ ಪ
ನಷ್ಟ ಪರಮ ಪತಿತ ಗತಿಯ|ಗೆಟ್ಟು ಅಜಮಿಳ ತನ್ನ|
ಕಷ್ಟ ಬಡುವ ಕಾಲದಲ್ಲಿ ಸುತನ ಪೆಸರನು|
ಮುಟ್ಟಿ ಕರಿಯೇ ತೃಪ್ತನಾಗಿ|ಅಷ್ಟರಿಂದ ಅವಗ ನಿನ್ನ|
ಪಟ್ಟಣಕ ನೀ ಅಟ್ಟಿ ಗತಿಯ|ಕೊಟ್ಟು ಸಲುಹಿದೆ ರಂಗಾ 1
ಸಂಧಿಸಿ ಮಧ್ಯರಾತ್ರಿಯೊಳಗ|ಬಂದು ದೂರ್ವಾಸನ್ನವ ಬೇಡ|
ಲಂದು ದೃಪದ ನಂದನೆ|ನಿನ್ನೆ ಸ್ಮರಿಸೆ ತ್ವರಿತದಿ|
ಬಂದು ನಿಂದು ಬೇಡಿದುದನು|ಛಂದದಿಂದಲಿತ್ತು ದ್ವಿಜರಾಜ|
ನಂದ ಬಿಡಿಸಿ ಐವರ ಮಾನ ಕುಂದಂತೆ ಕಾಯ್ದೆ ರಂಗಾ 2
ಐದು ವರುಷ ಹಸುಮಗನಾ|ಬೈದು ಮಲತಾಯಿ ಪೊರಗೆ|
ಹಾಕಲಾಗ ಧೃವನು ನಿನ್ನ ಕುರಿತು ಧ್ಯಾನವಾ|
ಗೈಯ್ಯಲಾಗಿ ಅಚಲ ಪದಕ|ಒಯ್ದು ಇಟ್ಟು ನೀನು ಅವನ|
ಕಾಯ್ದೆ ಮಹಿಪತಿ ನಂದನೊಡೆಯನಾದ ದೇವ ರಂಗಾ3