ಒಟ್ಟು 23 ಕಡೆಗಳಲ್ಲಿ , 14 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪುತರಾದ ವರನೆ ಕೃಪವನಧಿ ಹರಿವೊಲಿವಾ ಪ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಕುಕ್ಷಿ ಯದು ಭೂಷಣ1 ಅಸಮಂಜ ಸಂಜನಾಭಾ ವಸುದತ್ತ ಸೌಗಂಧಿಮಣಿ ಮುಕ್ತಕೇಸರೆ ನಿಸಿದಮಣಿ ವಾಹನಾ ಮಹವೀರ್ಯ ಕ್ಷೇಮಕ ಹಸ್ತಿ ವಸು ಅರಿಹಹೇಮಗರ್ಭ 2 ಕುಕುಸ್ಥ ಇಕ್ಷ್ವಾಕು ಮರುತ ಮುನಿಚೈತ್ರರಥ ವಿಕುಕ್ಷಿ ಸುರಥ ಆರಾವಾಚಿ ಶೃತಿ ಕೀರ್ತನ ಹುಶದಿಪ್ತಕೇತ ಸುವುತವಿಭಾವ ಸು ಶಕುತಿ ಶಿಖಿ ಸಾರ್ವಭೌಮಾ ಸುಖಸೇನ ಭಗೀರಥ ಅಜಮಾನು ಸ್ವರ್ಭಾನು ರುಕ್ಮಾಂಗದ ವಿರಾಜ 3 ಪುರಮೀಢ ಸುಮೀಢ ಭದ್ರಾಶ್ವ ರಮಣಕಾ ಹರಿಧರ್ಮನೇತ್ರ ಸುನೇತ್ರಕೇತುಮಾಲ ಪುರೋರವ ಮಿತ್ರಮನ ಜಯಸೇನ ಶುಭವರ್ಮ ಧರಯತೀ ಪುಣ್ಯದ್ರವಿಣೌ ಕರವೀರ ಸಾವೀರ ಪೌಷ್ಯಕೇಸರಿ ಸಿಂಗ ಮರುರುಕ್ಷ ಪ್ರದೀಪ ದಿಲೀಪ ಅಷ್ಟಕಕಂಪ ಅರಣಿ ಭೂಮನ್ಯು ಪ್ರಥಮಾಹವೀರ್ಯ ಸುರದತ್ತ ಹರಿವೀರಮನ್ಯು ವಿಶ್ವಾ 4 ಸುಮತಿ ಸುಂಹರ ರಘು ಮುಚಕುಂದ ದಶರಥ ಸುಮನ ದುಷ್ಯಂತ ಸಂಯಾತಿ ಹಂಸಧ್ವಜ ದಮಯಂತ ನೀಲಾಂಗ ಧರ್ಮಾಂಗದ ಶಮಲ ವಿಮರ ರವಿಕಾಂತ ನಹುಷ ದ್ರುಮಿಳ ಪದ್ಮಾಶತಾಯುಧ ಮಯೂರಧ್ವಜ ಪ್ರಮಿಲ ಕೀರ್ತಿವಾನ ತೊಂಡವಾನ ವಿದಗರ್ಭ ಅಮಿತ ಪರಾಕ್ರಮ ನಭಾಗಂಬರೀಷ ಸೌಮಿತ್ರ ಕಾರ್ತವೀರ್ಯಾ 5 ಪರಮೇಷ್ಟಿ ಮಣಿನಾಭ ಚೋಳ ತ್ರಿಶಂಖ ಶಂಖಣ ಶಂಖ ಮಣಿಕೇತ ಪಾಂಚಜನ್ಯ ಧನಂಜಯ ಕಾಶಿ ಸುಕಾಂತಕುಶ ಕುಶನಾಭ ಮಣಿಸೇನ ಪಾಂಡವ ಜಂಬುನದಿ ದಿವ್ಯರಥ ವನ ಕಕ್ಷಸೇನ ಜಾಕ್ಷಿತ ಪರಿಕ್ಷಿತ ದೃಂಹ್ಯ ಅನು ಅನಾಯುಪದಾತೀ 6 ಹರಿಶ್ರವ ಉತ್ತಾನಪಾದ ಕುಂಡಲಗಜ ಯವನಾಶ್ವರಾಜ ನೀಲಧ್ವಜ ಸುರವೃತ್ತ ಕವೇರ ಆಯು ದೃಢಾಯು ವಿಶಾಲ ಪ್ರತಿ ಶ್ರವ ಚಿತ್ರವೀರ್ಯ ಸುಭಗಾ ಕವಿವಂಗ ಅಂಗ ಕೋಶಲ ಹೇಮಗರ್ಭ ಶುಚಿ ವಿಕುಂಠ ಸುರಭೀ ಸೂ ಹವಿ ಅಭಿರಾಜ ಸುಹಿಜಾ 7 ಶಿಂಧು ಶುಭವರ್ನ ಸಿರ್ಯಾತಿ ಯಯಾತಿ ಸತ್ಯ ಸಂಧ ರೋಹಣ ಸಾಹದೇವ ವಾಪೀ ನಂದನ ಸುಮನ್ಯು ಸ್ವರ್ಭಾನು ಪಿಪ್ಪಲರವಿ ಚಂದ್ರಹಾಸ ಅಶ್ವವಂತ ಶಬಲಾಶ್ವ ಅಣು ಚಂದ್ರವರ್ಣ ಚಪನ ಸತ್ಯ ಸಯಾತಿ ಬಲ ವೃಂದ ವಿಷ್ಣುವರ್ಧನ 8 ಸಂತತದಲಲ್ಲೆಣಿಸಿದರೆ ಪಾರಗಂಡವರಾರು ಚಿಂತನೆಗೆ ತೋರಿದುದು ಸಾರಿದೆನು ಚನ್ನಾಗಿ ಸಂತರು ಕೇಳಿ ಲಾಲಿಸೀ ಪಿಂತೆ ಬಲು ಜನನದಾ ದುರಿತೌಘ ಪೋಗುವದು ಸಂತೋಷವಾಗುವುದು ಪರಿಸಿದ ಜನಕೆ ನಿತ್ಯ ಕಂತುಪಿತ ವಿಜಯವಿಠ್ಠಲನ ಚರಣಾಂಬುಜವ ಸಂತತಿ ಸಹಿತ ಕಾಂಬರೂ 9
--------------
ವಿಜಯದಾಸ
ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪುರಾಣವಿಷಯ ಶ್ರೀವೆಂಕಟೇಶ ಕಲ್ಯಾಣ ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ಸುರಮುನಿವಚನದಿ ಭೃಗುಮುನಿವರ ಪೋಗಿ ಹರುಷದಿ ಶ್ರೀಹರಿ ಉರಗಶಯನನಾಗಿ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವಂಥ ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ 1 ಸ್ವಾಮಿ ನೀನಿಜಧಾಮವನೇ ತೊರೆದೂ ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ ವಲ್ಮೀಕವನೆ ನೋಡಿ ಸನ್ಮುದವನ್ನೇ ತೋರುತ ಕಮಲ ಭವಶಿವ ತುರುಕರುರೂಪದಿ ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ ಭೂಮಿಗೊಡೆಯ ಚೋಳನೃಪಸೇವಕನು ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು ಅಮಿತ ಸುಗುಣಪೂರ್ಣ ಅಜರಾಮರಣ ನೀ ಮಸ್ತಕಸ್ಪೋಟನ ವ್ಯಾಜವ ತೋರಿ ಪ್ರೇಮದಿ ಗುರುಪೇಳ್ದೌಷಧಕಾಗಿ ನೀ ಮೋಹವ ತೋರಿದೆ ವಿಡಂಬನಮೂರ್ತೇ 2 ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ ಹಯದಿ ಕುಳಿತ ನಿನ್ನ ನೋಡಲು ಪ್ರಿಯಳಿವಳೆನಗೆಂದು ಯೋಚಿಸಿ ಕಾಯಜಪಿತ ನಿನ್ನ ಹಯವನೆ ಕಳಕೊಂಡು ಮಾಯದಿಂದ ನೀ ಮಲಗಿದೆ ತೋಯಜಮುಖಿಯಳ ಬೇಡಿದೇ ಆ ಯುವತಿಯನ್ನೇ ಸ್ಮರಿಸುತಾ ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು ಶ್ರೇಯವೆಂದು ಆಕಾಶನನೊಪ್ಪಿಸಿ ತಾಯಿಯಭೀಷ್ಟವನಿತ್ತೆ ಸ್ವರಮಣಾ 3 ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ ಭಕುತನಾದ ಆಕಾಶನೃಪತಿಯು ಬಕುಳೆ ಮಾ- ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ- ಗೆ ಕೊಟ್ಟನು ತಾ ಲಗ್ನಪತ್ರಿಕಾ ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ ಸಕಲಸಾಧನವಿಲ್ಲಿನ್ನು ಲೋಕೇಶಗರುಹಬೇಕಿನ್ನು ಲೋಕಪತಿಯೆ ಸುರಕೋಟಿಗಳಿಂದಲಿ ಈ ಕುವಲಯದಿ ನಿನ್ನಯ ಪರಿಣಯವೆಸಗಲು ಭಕುತಜನಪ್ರಿಯ ಶ್ರೀವತ್ಸಾಂಕಿತ 4 ಖಗವರವಾಹನ ದೇವಾ ಅಗಣಿತಮಹಿಮ ಗೋಮಯನೆನಿಸಿ ಸುರರ ಪೊರೆಯುತಾ ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ ಖಗಮೃಗ ರೂಪವ ಬಗೆಬಗೆ ಇಹೆ ಪೊಗಳಲಳವೇ ಗಿರಿವರವು ಹಗಲು ಇರುಳು ಭಗವಂತನೆ ನಿನ್ನನ್ನು ಪೊಗಳುತಿಹರು ನಿನ್ನ ಭಕುತರು ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ ಯುಗ ಯುಗದೊಳು ನೀನಗದೊಳು ನೆಲಸಿಹೆ ಜಗದ ದೇವ ರಾಜಿಸುವವನಾಗಿಹೆ ಮಿಗಿಲೆನಿಸಿದ ಶ್ರೀ ವೆಂಕಟೇಶಾ ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ 5
--------------
ಉರಗಾದ್ರಿವಾಸವಿಠಲದಾಸರು
ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಂಗೆ-ಕಾವೇರಿ ವಾತ ಸಂಗದಿ ಆವ ದೇಶವು ಧನ್ಯವೊ ಪ ಪಾವನಾತ್ಮಕ ಪ್ರಥಮ ಝಾವದಲಿ ಮಜ್ಜನವ ಗೈವ ಸುಜನರೇ ಧನ್ಯರೋಅ.ಪ ಆದಿ ಮಧ್ಯಾಂತರಂಗರ ಸೇವೆಯನು ಮಾಡಿ ಸಾಧಿಸಿದೆ ಮಾಂಗಲ್ಯವ ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ ಮಾದರದಿ ಸೇವಿಸುವರು 1 ಚೋಳ ಮಂಡಲಭಾಗ್ಯ ಪೇಳಸಾಧ್ಯವೆ ನಿನ್ನ ಲಾಲನೆಯ ಪಡೆಯುತಿರಲು ಕೇಳುವನು ನಿನ್ನಯ ಕೃಪಾಲವದಿ ತನು ಮನವ ಕೀಳು ವಿಷಯಕೆ ಬಿಡದಿರು 2 ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು ಮಾನ್ಯಳಾಗಿರುವೆ ಮಾತೆ ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ ಸನ್ನ ಮುಖಿ ನಿಶ್ಚಯವಿದು 3
--------------
ವಿದ್ಯಾಪ್ರಸನ್ನತೀರ್ಥರು
ನಾರದ ಕೊರವಂಜಿ ಜಯ ಜಯ ದಯಾಕರನೆ ಹಯವದನ ಭಯಹರನೆ ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1 ಹರಿಯೇ ಪತಿಯಾಗಬೇಕೆಂದು ರುಕುಮಿಣಿ ಪರದೇವತೆಯ ನೆನವುತಿರಲು ಕೊರವಂಜಿ ವೇಷದಿ ರುಕುಮಿಣಿದೇವಿಗೆ ಪರಮ ಹರುಷವೀವೆನೆಂದು ನಾರದ ಬಂದ 2 ಧರಣಿ ಮಂಡಲದಲ್ಲಿ ನಾರದ ಧರಿಸಿ ಕೊರವಂಜಿ ವೇಷವ ಸುರನರಾದಿಗಳೆಲ್ಲರಿಗೆ ತಾ ಪರಮ ಆಶ್ಚರ್ಯ ತೋರುತ್ತ 3 ಬಂದಳು ಕೊರವಂಜಿ ಚಂದದಿಂದಲಿ ಮಂದಹಾಸವು ತೋರುತ್ತ ಪಾದ ಧಿಂಧಿಮಿ ಧಿಮಿ- ಕೆಂದು ನಿಂದಭೀಷ್ಟವ ಪೇಳುತ 4 ಗಗನದಂತಿಹ ಮಧ್ಯವು ಸ್ತ- ನಘನ್ನ ಭಾರಕೆ ಬಗ್ಗುತ ಜಗವನೆಲ್ಲವ ಮೋಹಿಸಿ ಮೃಗ ಚಂಚಲಾಕ್ಷದಿ ನೋಡುತ 5 ಕನಕಕುಂಡಲ ಕಾಂತಿಯಿಂದಲಿ ಗಂಡಭಾಗವು ಹೊಳೆವುತ್ತ ಕನಕಕಂಕಣ ನಾದದಿಂದಲಿ ಕಯ್ಯ ತೋರಿ ಕರೆಯುತ್ತ 6 ಕುಂಕುಮಗಂಧದಿ ಮಿಂಚುವೈಯಾರಿ ಚುಂಗು ಜಾರಲು ಒಲವುತ್ತ ಕಿಂಕಿಣಿ ಸರಘಂಟೆ ಉಡಿಯೊಳು ಘಲ್ಲು ಘಲ್ಲೆಂದು ಬಂದಳು ಘಲ ಘಲ ಘಲ್ಲು ಘಲ್ಲೆಂದು ಬಂದಳು 7 ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ ಪರಿಮಳಿಸುವ ಫಣಿವೇಣಿ 8 ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ ಸರಸವಾಡುತ್ತ ತಾನೆ ಬಂದು 9 ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ ಸರಿಯಿಲ್ಲವೆಂದು ತನ್ನ ಪಾಡಿ 10 ಮನೆಮನೆಯಿಂದ ಬಂದಳು ಕೊರವಂಜಿ ತಾನು ಮನೆಮನೆಯಿಂದ ಬಂದಳು ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11 ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು. ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12 ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ- ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13 ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14 ಚೆಲುವ ತುರುಬಿನಿಂದಲಿ ಜಗುಳುವ ಚಲಿಸುವ ಪುಷ್ಪದಂದದಿ ನಲಿನಲಿ ನಲಿದಾಡುತ್ತ ಮಲ್ಲಿಗೆ ಝಲಝಲಝಲ ಝಲ್ಲೆಂದು ಉದುರುತ್ತ ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15 ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು. ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ. ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ. ಮದನ ಶುಭ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16 ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17 ಲಾಟ ಮರಾಟ ಕರ್ಣಾಟ ಸೌಮೀರಾದಿ ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18 ಮಾಯಾ ಕಾಶೀ ಕಾಂಚಿ ಅವಂತಿಕಾಪುರೀ ದ್ವಾರಾವತೀ ಚೇದಿ|| ಮೆಚ್ಚಿ ಬಂದ ಕೊರವಿ ನಾನಮ್ಮ ಪುರಗಳಿಗೆ ಹೋಗಿ ನರಪತಿಗಳಿಗೆ ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19 ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20 ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?) ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21 ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು. ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22 ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು. ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23 ರನ್ನೆ ಗುಣಸಂಪನ್ನೆ ಮೋಹನ್ನೆ ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24 ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ ಮಂಗಳದ ಕೈಯ್ಯ ತೋರೇ ಎಲೆದುಂಡೀ ಕೈಯ ತೋರೆ ಕೈಯ ತೋರೆ 25 ಕೇಳೆ ರನ್ನಳೆ ಎನ್ನ ಮಾತ ಬೇಗ ಇಳೆಯರಸನಾದನು ಪ್ರಿಯ26 ಕಳಸಕುಚಯುಗಳೆ ಚಿಂತೆ ಬೇಡ ನಿನ್ನ ಕರೆದಿಂದು ಕೂಡ್ಯಾನು ರಂಗ 27 ನಾಡಿನೊಳಧಿಕನಾದ ನಾರಾಯಣನ ಪತಿ ನೀನು ಮಾಡಿ ಕೊಂಡೆನೆಂದು ಮನದಲ್ಲಿ ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28 ಸುಂದರಶ್ಯಾಮ ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29 ಶಂಖಚಕ್ರಯುಗಲ ಪಂಕಜನಾಭುಂಡು ಪಂಕಜಮುಖೀ ನೀವು ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30 ಚೆಲುವಾ ನಾ ಮಾಟಾ ನೀಕು ಪುಚ್ಚಾ ಚೆಲುವಾ ನಾ ಮಾಟ ಕಲ್ಲಗಾದು ನಾ ಕಣ್ಣೂಲಾನೂ ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31 ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ ಅಮಿತ ಬಹುಮಾನಾಮಂದೀತೀನಮ್ಮಾ ಚೆಲುವ ನಾ ಮಾಟ ಚೆಲುವ 32 ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ ಸಂತೋಷದಿ ನಾನಾಡಿದ ಶಾಂತ ಮಾತೆಲ್ಲ ಇದು ಪುಸಿಗಳಲ್ಲ ಬೇಗ ಬಂದಾನೋ ನಲ್ಲಾ ಆಹಾ ಆಹಾ ಬಂತೇ ಮನಸ್ಸಿಗೆ
--------------
ವಾದಿರಾಜ
ನೋಡಿರಯ್ಯ ಈ ರೂಢಿಯ ಜನರೆಲ್ಲಾ ಮೂಡಲಗಿರಿವಾಸನಾ ವೆಂಕಟೇಶನಾ ಪ ಬೇಡಿದ ವರಗಳ ಭಕ್ತ ಸಮೂಹಕೆ ನೀಡುತಲಿ ಕೊನೆಗೆ ನಿಜಪದವೀವನಾ ಅ.ಪ ಹರಿಬ್ರಹ್ಮರೊಳಾವನುತ್ತಮನೆಂದು ಪರೀಕ್ಷಿಸೆ ಭೃಗುಮುನಿಯು ತೆರಳಿಬಂದು ಅಜಹರನೊಪ್ಪದೆತಾ- ಪರಮಪದಕೆ ಬರಲು ಪರಿ ಸಿರಿಯ ತೊಡೆಯ ಮೇಲೆ ಹರಿಮಲಗಿರೆ ಕಂಡು ಚರಣದಿಂದ ಹೃದಯಕೆ ತಾಡನೆ ಮಾಡಲು ಪರಮ ಭಕುತಿಯಿಂದ ಋಷಿಯ ಪೂಜಿಸಿದ 1 ಸಿರಿಕರವೀರಪುರವನೈದಲು ಧರೆಯೊಳು ವೆಂಕಟಗಿರಿಯ ಸಾರುತ- ಲ್ಲಿರೆ ವಲ್ಮೀಕದಲಿ ಸರಸಿಜಭವ ಶಿವರು ತುರುಕರುವಾಗಿ ಪಾ ಲ್ಗರೆಯೆ ವಲ್ಮೀಕದಲಿ ದೊರೆ ಚೋಳನ ಭೃತ್ಯಗೋವನು ಭಾದಿಸೆ ಶಿರದೊಳಾಂತು ನೃಪಗೆ ಶಾಪವನಿತ್ತ 2 ಮನುಜನೋಲ್ ನಟಿಸುತಲಂಬರರಾಜನ ತನುಜೆಯ ಕೈಪಿಡಿದು ನೆನೆವರಿಗೆ ತಿರುಪತಿಯೆ ವೈಕುಂಠ- ವೆನುತ ಸಾರಿ ಒಲಿದು ಘನಮಹಿಮೆಗಳನು ತೋರಿ ಸಕಲರಿಂ ಗುಣನಿಧಿ ಶ್ರೀಗುರುರಾಮವಿಠಲ ಈ ಘಣಿಗಿರಿಯೊಳಗಿರುತಿಪ್ಪ ತಿಮ್ಮಪ್ಪ 3
--------------
ಗುರುರಾಮವಿಠಲ
ಪಾದವನು ನಂಬಿದೆನೊ ಪರಮಪುರುಷಾ ಪಾವನನ ಮಾಡೆನ್ನ ಶ್ರೀರಂಗನಾಥ ಪ ಪಾದ ಪಾದ ಬಲಿಯ ಪಾದ ಪಾದ 1 ಪಾದ ಪಾದ ಪಾದ ಪಾದ 2 ಪಾದ ಪಾದ ಪಾದ 3 ಪಾದ ಪಾದ ಪಾದ ಪಾದ 4 ದುರುಳ ಕಂಸಾಸುರನ ಎದೆಯ ತುಳಿದ ಪಾದ ಮುಚುಕುಂದಗೆ ಮುಕ್ತಿಯನಿತ್ತ ಪಾದ ಕಿಚ್ಚು ಬಳಸಲು ಪರ್ವತವನೆತ್ತಿದ ಪಾದ5 ಶಿಲೆಯಾದ ಆಹಲ್ಯೆಯನು ಕಾಯ್ದ ಪಾದ ಪಾದ ಹರನ ಧನುವನು ಮುರಿದು ಜಾನಕಿಯ ತಂದ ಪಾದ ಪಾದ 6 ಪಾದ ಪಾದ ಸೇತುಬಂಧನ ಮಾಡಿ ಸೀತೆಯನು ತಂದ ಪಾದ ಪಾದ 7 ಪಾದ ಪಾದ ಪಾದ 8 ರಾಜಸೂಯಾಗದಲಿ ಪೂಜೆಗೊಂಡ ಪಾದ ಪಾದ ದಂತವಕ್ರಾದಿಗಳನು ಸೆಳೆದುಕೊಂಡ ಪಾದ ಪಾದ 9 ಕÀುರುಪಾಂಡವರಿಗೆ ಸಂಧಿಗೈತಂದ ಪಾದ ವಿದುರನಾ ಮನೆಯಲ್ಲಿ ಭೋಜನಗೈದ ಪಾದ ಪಾದ ದುರುಳ ದುರ್ಯೋಧನನ ಉರುಳಿಸಿದ ಶ್ರೀಪಾದ 10 ರಣದೊಳಗೆ ಅರ್ಜುನಗೆ ಸಾರಥಿಯಾದ ಪಾದ ದೊರೆ ಧರ್ಮಾದಿಗಳ [ನು] ಒಲಿದ ಪಾದ ಪಾದ ಪಾದ 11 ಪಾದ ಇಕ್ಷ್ವಾಕು ಶ್ರೀರಾಮರಾರಾಧಿಸಿದ ಪಾದ ಧರ್ಮವರ್ಮಾದಿ ಚೋಳೇಂದ್ರ ಪೂಜಿತ ಪಾದ ಪಾದ 12 ತೊಂಡಮಾನ್ ಚಕ್ರವರ್ತಿಗೊಲಿದು ಬಂದ ಪಾದ ಶೇಷಾದ್ರಿಗಿರಿಯಲ್ಲಿ ನೆಲೆಸಿರ್ಪ ಪಾದ ಪಾದ ಪಾದ 13 ಅಜನ ಯಜ್ಞಕುಂಡದೊಳಗುದಿಸಿ ಬಂದ ಪಾದ ಪಾದ ವ್ಯಾಧರೂಪಿನಲ್ಲಿ ನಡೆತಂದ ಶ್ರೀಪಾದ ಪಾದ 14 ಪಾದ ಯಾದವಾಗಿರಿಯಲ್ಲಿ ನೆಲೆಸಿರ್ಪ ಪಾದ ವರಸಂಧಿಗೃಹದಲ್ಲಿ ವಾಸವಾಗಿಹ ಪಾದ ಪಾದ 15 ಕರುಣದಿಂದರ್ಜುನಿಗೆ ಸಾರಥಿಯಾದ ಪಾದ ಕೈರವಿಣೀ ತೀರದಲಿ ನೆಲೆಸಿರ್ಪ ಪಾದಾ ರುಕ್ಮಿಣೀ ಬಲಭದ್ರರೊಡನೆ ಒಪ್ಪಿದ ಪಾದ ಕರುಣ ವೆಂಕಟಕೃಷ್ಣನೆಂಬೊ ಬಿರುದರಳ್ಳ ಪಾದಾ 16
--------------
ಯದುಗಿರಿಯಮ್ಮ
ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು
ಯಾಕಿಷ್ಟು ದಯವಿಲ್ಲ ಎನ್ನಮೇಲೆನೀ ಕರುಣಿಸಿದರಾಗದ ಕಾರ್ಯವುಂಟೆ ಪ ಬಾಲೆಗೊಲಿದು ಹಾಲಕುಡಿದವನೆಂದೆನೆಸೂಳೆಯ ಮನೆಗೆ ನಾ ಹೋಗೆಂದೆನೆಲೋಲಾಕ್ಷಿಯ ಕುಚದೊಳೆ ಮಾತಾಡೆಂದೆನೆಚೋಳನಂತೆ ಹೊನ್ನ ಮಳೆಯ ಕರೆಯೆಂದೆನೆ1 ಊರುಗಲ್ಲೊಳು ಕನ್ನವ ಕೊಯಿದನೆಂದನೆಊರನೆ ಕೈಲಾಸಕ್ಕೊಯಿಯೆಂದೆನೆಕ್ರೂರ ಬಾಣನ ಬಾಗಿಲ ಕಾಯ್ದನೆಂದೆನೆನೀರ ಮಂಡೆಯೊಳು ಪೊತ್ತವನೆಂದು ಪೇಳ್ದೆನೆ 2 ಮಲ್ಲಗಾಳಗವನು ಮಾಡಿದನೆಂದೆನೆಬಿಲ್ಲಿನಿಂ ಬಡಿಸಿಕೊಂಡವನೆಂದೆನೆಎಲ್ಲರರಿಯೇ ತಿರಿದುಂಡವನೆಂದನೆಕಲ್ಲುಮನವೇ ಕೆಳದಿರಾಮೇಶ್ವರಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ರಾಮಾನುಜಾಚಾರ್ಯ ಮೌನಿವರ್ಯ ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ ಆದಿಯೊಳು ನೀನಾದಿಶೇಷನು ಹರಿಶಯ್ಯೆ ಮೋದಕರ ಪ್ರಹ್ಲಾದ ಎಂದೆನಿಸಿದೆ ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ 1 ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ ಮಾತೆವೊಲು ಉಭಯವೇದಗಳ ಪೊರೆದೆ 2 ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ ದಾರಿತೋರಿದೆ ಹರಿಯ ಸೇವಿಸುವ ಪರಿಯ ಪರಮಾರ್ಥಿಕರಾಗಿ ಪರಮವೈಷ್ಣವರಿರಲು ಸಾರಸುಖ ಪದತೋರ್ದೆ ಯತಿಸಾರ್ವಭೌಮ 3 ಎಂದೆಂದು ಮರೆಯದ ಕೂರೇಶರಾ ಸಖ್ಯ ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು ತಂದೆ ಗುರುವಿನ ಗುರುವೆ ದೇವಮಾನ್ಯ 4 ಯಾದವನ ಚೋಳನ ಕೃತ್ರಿಮದ ಕೋಟೆಗಳು ಮಾಧವನ ಡೆಲ್ಲಿಯಿಂ ಕರೆತಂದುದು ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು ಈ ಧರೆಯ ಕೀರ್ತಿಗೆ ಮೊದಲಾದವು 5 ರಾಮಚಂದ್ರನ ಕಾಡವಾಸವಂ ನೆನಪೀವ ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ ತಾಮಸರು ಸಾವಿರರ ಒಂದೆ ವಾರದಿ ಗೆಲ್ದ ಮಾಮೈಮೆ ಯಾರಿಗಿದೆ ಭೋಗಿರಾಜಾ 6 ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ ಪರಮಪದಕೂ ಮಿಗಿಲು ವೈಭವವ ಗೈದೆ ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ 7 ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು ಮನ್ನಣೆಯ ಪಡೆದಿರವ ಶ್ರೀಮಂತರು ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ ಮೂರ್ತಿ ಜಾಜೀಶ ಕೀರ್ತಿ 8
--------------
ಶಾಮಶರ್ಮರು
ವೆಂಕಟೇಶ ಕಲ್ಯಾಣ ಶ್ರೀವೆಂಕಟ ದೊರೆಯೆ ಪ ವಿಶ್ವಸೃಷ್ಟಿಯಗೈದಂಥ ತಾನಿನ್ನು ಅರಿಯೆನು ಎಂತೆನಲು ಅ.ಪ ಸುರವರ ನಾರೆಂದು ಅರಿಯೆಭೃಗುವು ತಾನು ಪತಿ ಹರ ವಿಧಿಗಳೆನೆಲ್ಲ ಬರುವ ಬಗೆಯ ಕಂಡು ಸುರತ ಕೇಳಿಯಸೋಗು ಧರಿಸಿ ಮಲಗಿರಲಂದು ಜರಿದುವದಿಯಲು ವಕ್ಷ ಹರಿಸಿ ದುಗುಡವ ಮುನಿಗೆ ವರಸಿ ಚರಣದ ಕಣ್ಣು ತರಿದು ಸಾಧನೆ ಅಧಿಕ ಸಿರಿಗೆ ಪ್ರೇರಿಸಿ ಕೋಪ ತೊರೆದು ಧಾಮವ ಬೇಗ ಧರೆಗೆ ಇಳಿಯುತ ಬಂದು ಗಿರಿಯ ಹುತ್ತವ ಸೇರಿ ಸುರಿಸೆ ವಿಧಿಯು ಪಾಲು ಕರುಣದಿಂದಲಿ ಕೊಂಡು ದೊರೆಯ ಸೇವಕ ಗೋವ ಹರಿಸೆ ಕೊಡಲಿಯ ನೆತ್ತೆ ಶಿರವನೊಡ್ಡುತ ರಕ್ತ ಧಾರೆ ಚಿಮ್ಮಿಸಿನಭದಿ ಬರಲು ಚೋಳನು ದೊರೆಗೆ ಕ್ರೂರ ಶಾಪವನಿತ್ತು ಕರೆಸಿಗುರುಗಳಮದ್ದು ತರಲು ಹೊರಟದೇವ ನಿರುತ ಚಿನ್ಮಯಗಾತ್ರ ಉರು ವೈದ್ಯ ಧನ್ವಂತ್ರಿ ನಿರುಪಮ ನಾಟಕದೆ 1 ಸಾಮ ವಿಶ್ವದ ಸಾರ್ವಬೌಮ ಬೇಡಿದೆ ರಚಿಸೆ ಧಾಮ ಕ್ರೋಢನ ಕಂಡು ಪ್ರೇಮದಿಂದಲಿ ಬಕುಳೆ ವಾಮ ಕಂದನು ಆಗಿ ಭಾಮೆ ಪಾಕವನುಂಡು ಕಾಮ ವರ್ಜಿತ ಪೂರ್ಣ ಕಾಮ ಕುದುರೆಯನೇರಿ ಕಾಮ ಬೇಟೆಯೋಳ್ ನಿಜ ಕಾಮಿನಿಯನು ಕಂಡು ದ್ಧಾಮ ಮೋಹವ ತೋರಿ ಭೂಮಿಜಾತೆಯ ಘಟಿಸೆ ಭಾಮೆ ಬಕುಳೆಯ ಕಳಿಸಿ ಧರ್ಮದೇವತೆಯೆನಿಸಿ ಜಾಮಾತ ಸನ್ನಾಹ ಜಾಣ್ಮಿಯಿಂದಲಿನಡೆಸಿ ಕಾಮಿತಾರ್ಥವ ಕೊಂಡು ಧಾಮ ಸೇರಲು ಬಕುಳೆ ಹೇಮಮಯ ದಾರಿದ್ರ ನೇಮದಾಟವ ತೋರಿ ಹೇಮಗರ್ಭನ ಕರಿಸೆ ಸೋಮಶೇಖರ ಕೊಡಿಸೆ ಹೇಮರಾಶಿಯ ತಂದು ಭೀಮರುಜೆಗಳ ನಟಿಸೆ ಸೋಮಸೋದರಿಕರಿಸಿ ಮಾಮನೋಹರಗೈದ ಸೀಮೆಇಲ್ಲದಂಥ 2 ಮದುವೆ ಹಬ್ಬಿಸಿ ಭಕ್ತ ಹೃದಯ ತುಂಬುವ ನಂದ ಮುದದಿ ಬೆಳೆಸೆ ಪಯಣ ವದಗೆ ಶುಕರಾತಿಥ್ಯ ಸದಯಗೊಳ್ಳುತ ತೃಪ್ತಿ ಬದಿಗರೆಲ್ಲರಿಗಿತ್ತು ಮದನಮೋಹನ ತೇಜ ಮದುವೆ ಊರನು ಸೇರಿ ಕುದಿವ ಕುತೂಹಲದಿ ಅದ್ಭುತ ಸ್ವಾಗತವ ಪದುಮಾವತಿಯ ತಂದೆ ಹೃದಯ ಪೂರ್ವಕ ನೀಡೆ ಆದರದಿ ಸ್ವೀಕರಿಸಿ ಪಾದದ್ವಂಧ್ವವ ನೀಡಿ ವೇಧಾದಿ ನಿಜವೃಂದ ಮೇದಿನೀ ಸುರವೃಂದ ಮೋದ ಮೆಲ್ಲಲು ಕೂಡಿ ವೇದ ಘೋಷವುಗೈಯೆ ವಾದ್ಯದುಂದುಭಿ ಮೊಳಗೆ ವೇದವೇದ್ಯನು ಮದುವೆ ವೇದಿಕೆಯನು ಏರಿ ಕಾದುಕೊಂಡಿಹ ಜನಕೆ ಸಾಧಿಸುತಲಭೀಷ್ಠ ಕರ ಸಾದರ ಪಿಡಿದಂಥ ಖೇದ ತರಿಯುತ ನಿಜ ಮೋದದಾನವ ಗೈವ 3 ತಿರುಪತಿ ತಿಮ್ಮಪ್ಪ ಸುರಗಣ ಜಗದಪ್ಪ ವರಸಮರಿಲ್ಲಪ್ಪ ಭರದಿ ಕಸಿವಕಪ್ಪ ಅರಿತವರಿಲ್ಲಪ್ಪ ಧರಿಸಿಹ ಸಿರಿಯಪ್ಪ ಕರುಣ ಸುರಿಸುವನಪ್ಪ ಉರುಗಗಿರಿಯಲ್ಲಿಪ್ಪ ಸುರತರು ಇವನಪ್ಪ ಗಿರಿಸಪ್ತ ದೊರೆಯಪ್ಪ ಹರಿಕೆ ಕೊಳ್ಳುವನಪ್ಪ ಅರಿಮಾರಿ ಸರಿಯಪ್ಪ ಶರಣರ ಪೊರೆಯಪ್ಪ ಕರೆಕರೆ ಬೇಡಪ್ಪ ಸ್ವರತ ಸುಖಮಯನಪ್ಪ ಅರವಿದೂರನಪ್ಪ ಮರೆವ ಶರಣರ ತಪ್ಪ ಸರ್ವಹೃದಯಗನಪ್ಪ ಪರಿಪೂರ್ಣಗುಣನಪ್ಪ ಅರಿಶಂಖುಧರನಪ್ಪ ಉರಿವ ರವಿಯಲ್ಲಿಪ್ಪ ಸರ್ವಮುಕ್ತರಿಗಪ್ಪ ಬಿರಿವ ಖಳರೆದೆಯಪ್ಪ ಮರುತ ಮಂದಿರನಪ್ಪ ಪರಿಮರ ಹೌದಪ್ಪ ಪೊರೆದೆ ಮಾಧವನಪ್ಪ ವರಲೀಲಾ ಮಯನಪ್ಪ ಪರಮ ಅದ್ಭುತನಪ್ಪ ಪರಮಾತ್ಮಹೌದಪ್ಪ ಕರಣ ಚೋದಿಪನಪ್ಪ ಕರಣಕ್ಕೆಸಿಗನಪ್ಪ ದುರಿತ ಪಾವಕನಪ್ಪ ಪರಮ ಪಾವನನಪ್ಪ ಹರನ ಅಪ್ಪನಿಗಪ್ಪ ಪರಮೋಚ್ಚಹೌದಪ್ಪ 4 ಬಾದರಾಯಣ ಪೂರ್ಣ ಭೋಧ ತೀರ್ಥರ ದೈವ ಮೋದ ಚಿನ್ಮಯಗಾತ್ರ ವೇದ ವಿಭಜಿಸಿ ನಿಂದ ಖೇದವಿದ್ಯೆಯ ಕೊಂದ ವಾದಿವಾರಿಣಿ ಸಿಂಹ ವಾದಿರಾಜರ ಹೃದಯ ಮೋದ ಹಯಮುಖ ಶುದ್ಧ ವೇದರಾಶಿಯತಂದ ವೇಧಗರುಹಿದ ಕರುಣಿ ಖೇದ ನೀಡುತಲಿದ್ದ ಆದಿದೈತ್ಯರ ಕೊಂದು ಮೇದಿನಿಯನು ಎಯ್ದೆ ಶ್ರೀಧರ ನರಸಿಂಹ ಗೋಧರಮಹಿದಾಸ ಕಾದುಕೊ ಶ್ರೀ ವಿಷ್ಣು ಭೇದ ವಿದ್ಯೆಯಮನಕೆ ಭೋಧಿಸು ವರ ಕಪಿಲ ಸಾಧು ಋಷಭದತ್ತ ಯಾದವ ಕುಲರನ್ನ ಕಾಯ್ದೆ ಗೋಪಿಯ ರನ್ನ ಸೀಳ್ದೆ ಕೌರವರನ್ನ ಪೇಳ್ದೆ ಪಾರ್ಥಗೆ ಗೀತೆ ಶುದ್ಧ ಜಯಮುನಿಹೃಸ್ಥ ಮಧ್ವ ಇಂದಿರೆನಾಥ ಮುದ್ದು ಕೃಷ್ಣವಿಠಲ ಬಿದ್ದೆ ಪಾದದಿ ಶರಣು 5
--------------
ಕೃಷ್ಣವಿಠಲದಾಸರು
ಶ್ರೀ ಶ್ರೀನಿವಾಸ ಕಲ್ಯಾಣ ಲಾವಣಿ ಮಾಧವ ಪ ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ. ದೇವ ದೇವೇಶನು ಯಾರೆಂತೆಂದು ಕೋವಿದ ಭೃಗುಮುನಿ ಹುಡುಕುತ ಬಂದು ಪಾರ್ವತಿ ಪತಿಹರ ವಿಧಿಗಳ ಜರಿದು ಧಾವಿಸಿ ಹರಿಯೆಡೆ ಬರ್ಪುದ ಕಂಡು ಭಾವಜ ಪಿತರತಿ ಸೋಗನು ಹಾಕೆ ದೇವನ ಮಾಯೆಯು ಮುಸುಕಲು ಮುನಿಗೆ ಈ ವಿಧ ಸಲ್ಲದು ಹರಿಗೆಂತೆಂದು ಪಾವನ ನೆದೆಯನು ವದ್ದನು ದುಡುಕಿ1 ಮಾಧವ ಚರಣವ ತೊಳೆದು ಹರಿಸುತ ದುಗುಡವ ಭಕ್ತನಿಗಂದು ಕರದಿಂ ದೊತ್ತುತ ಚರಣದ ಕಣ್ಣು ತರಿಯಲು ಹೆಚ್ಚಿನ ಸಾಧನೆ ಮುನಿಗೆ ಹರುಷದಿ ತೆರಳಿದ ಋಷಿವರ ತಾನು ಅರಿಯುತ ಕಾಂತನ ಮನವಂ ಸಿರಿಯು ಸರಸರ ಕೋಪವ ನಟಿಸುತ ತಾನು ಬಿರುಸಿನ ನುಡಿಗಳ ಆಡಿದಳಂದು 2 ಏನಿದು ಮುನಿ ವಿಪರೀತವು ಥರವೆ ನಾನಿಹ ಸ್ಥಳವನು ವದೆಯುವದೆಂದು ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ ನಾನಿಹೆ ಬರಿಸತಿ ಭಕ್ತರೆ ಹೆಚ್ಚು ಕಾನನ ಸೇರುವೆ ನನಗೇಕೀ ಮನೆ ಮಾನವು ಹೊಯಿತು ಯನ್ನಲು ಸತಿಯು ಮೌನವ ಧರಿಸಲು ಗಂಡನು ನಗುತ ದೀನರ ಪೊರೆಯಲು ಬಂದಳು ಭುವಿಗೆ 3 ಗಂಡನ ಬಿಡುವಳೆ ಲಕ್ಷ್ಮೀದೇವಿ ಪುಂಡರ ಮಾತಿದು ನಂಬಿಲುಬೇಡಿ ಗಂಡನ ಮನತೆರ ನಟಿಸಿದಳಷ್ಟೆ ಗಂಡನು ಹಾಗೆಯೆ ತೊರೆಯುತ ಧಾಮ ಕುಂಡಿಲಿ ಗಿಳಿಯುತ ಅಲೆಯುತ ಹೊರಟ ಕಂಡಲ ಗಿರಿಯೆಡೆ ನಡೆತಾತಂದ ಕಂಡನು ಹುತ್ತವ ಒಂದೆಡೆ ತಾನು ಕುಂಡಲಿಗೊಡೆಯನು ನೆಲಸಿದನಲ್ಲಿ 4 ಪಾವನ ಗಿರಿಯದು ಕೇಳಿರಿ ಎಲ್ಲ ದೇವನ ಖಗಮೃಗ ಬಳ್ಳಿಗಳಾಗಿ ದೇವ ಸಮೂಹವು ಸೇವಿಪರಲ್ಲಿ ಕೋವಿದ ಋಷಿಗಳು ಧ್ಯಾನಿಪರೈಯ ಭಾವಸು ಭಕ್ತಿಲಿ ನೋಡಲು ಗಿರಿಯ ಜೀವರ ಪಾಪಗಲೆಲ್ಲಾ ನಾಶ ನೋವನು ಕಾಣರು ಹರಿಕೃಪೆ ಮುಂದೆ ದೇವನು ಇರೆ ಇದೆ ಭೂವೈಕುಂಠ 5 ಕೃತಯುಗದಲ್ಲಿದು ವೃಷಭಾಚಲವು ಗತಿಸಿದ ರಕ್ಕಸ ಹರಿಯಿಂತೆಂದು ಸುತನಂ ಪಡೆಯಲು ಅಂಜಿಲಿದೇವಿ ಅತಿ ತಪಗೈದಳು ತ್ರೇತೆಯಲೆಂದು ಉತ್ತಮ ನೆಂಬುವ ಗರ್ವವ ನೀಗಿ ಸ್ತುತಿಸಿದ ಶ್ವಾಸನ ಶೇಷನು ಎಂದು ಇತ್ತರು ಮೂರಲಿ ಶೇಷನ ನಾಮ 6 ವೆಂಕಟ ಗಿರಿಯಿದು ಕಲಿಯುಗದಲ್ಲಿ ಸಂಕಟ ನೀಗಿದ ಮಾಧವನಿಲ್ಲಿ ಸಂಕಟ ನೀಡುವ ಪಾಪಗಳನ್ನು ಶಂಕರ ಹರಿತಾ ಕಡಿಯುವನೆಂದು ವೆಂಕಟ ನೆನಿಸುತ ಮೆರೆಯುವ ನಿಲ್ಲಿ ಶಂಕೆಯ ಮಾಡದೆ ಶರಣೆಂದಲ್ಲಿ ಪಂಕಜ ನೇತ್ರನು ಪೊರೆಯುವನಿಲ್ಲಿ ಮಂಕುಗಳಾಗದೆ ಭಜಿಸಿರಿ ಬೇಗ 7 ಇಂದಿರೆ ಕೆರಳೆ ತಂದೆಯು ತೊರೆದನೆ ನಿಜ ವೈಕುಂಠ ಪೊಂದಿಹ ಹುತ್ತವ ಏನಿದು ಛಂದ ಕಂದನು ನಾನಿಹೆಎನ್ನುತ ಬೊಮ್ಮ ತಂದೆಗೆ ಕ್ಷೀರವ ಕರೆಯಲುನಿತ್ಯ ಛಂದದ ಗೋತನು ಧರಿಸುತ ಶಿವನ ಕಂದನ ಗೈಯುತ ಮಾತೆಯ ಸಹಿತ ಬಂದನು ಚೋಳನ ಅರಮನೆಯೆಡೆಗೆ 8 ಕೊಳ್ಳಲು ರಾಣಿಯು ಸೇರುತ ಗೋಷ್ಠಿ ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ ಇಲ್ಲವೆ ಆಗಲು ರಾಣಿಗೆ ಹಾಲು ಗೊಲ್ಲನ ಶಿಕ್ಷಿಸಿ ಬೈಯಲು ಬಹಳ ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ ಕೊಲ್ಲಲು ಗೋವನು ಕೊಡಲಿಯನೆತ್ತೆ ಬಲ್ಲಿದ ತಡೆಯಲು ಶಿರವನು ಒಡ್ಡೆ ನಿಲ್ಲದೆ ಗಗನದಿ ಚಿಮ್ಮಿತು ರಕ್ತ 9 ನೋಡುತ ಮಡಿಯಲು ಗೊಲ್ಲನು ಅಲ್ಲೆ ಓಡುತ ಗೋಗಣ ಹಟ್ಟಿಯ ಸೇರೆ ಜಾಡನು ಪಿಡಿಯುತ ಚೋಳನು ಬರಲು ಕೇಡಿಗ ನೃಪನೆ ಪಿಚಾಚಿಯು ಆಗೆನೆ ಬೇಡಲು ಕ್ಷಮೆಯನು ಬಹುಪರಿಹರಿಯ ನೀಡಿವಿಶಾಪವ ವೆಂಕಟ ಕರುಣಿ ಆಡಲು ತೊಡಗಿದ ಈ ವಿಧ ಮುಂದೆ 10 ಆದುದು ಆಯಿತು ಚೋಳನೆ ಕೇಳು ಭುಂಜಿಸು ಕರ್ಮ ಪದ್ಮಾವತಿ ಯೆಂಬಾಕೆಯ ಮುಂದೆ ಮೋದದಿ ಮುದುವೆಯ ನಾಗುವೆ ಆಗ ಭೂಧವ ಮಾವನು ನೀಡುತ ಮಕುಟ ಕವಿ ವಾರ ನಾಧರಿಸುವಾಗಿಲ್ಲದೆ ಬಾಧೆ ಪೊಂದುವಿ ಕಲಿಕೊನೆ ಪೂರ್ವಾವಸ್ಥೆ 11 ಪೇಳತ ಲೀಪರಿ ಚೋಳಗೆ ದೇವ ಲೀಲೆಯ ತೊರಲು ಘಾಯವ ಪಿಡಿದು ಕೇಳಲು ಔಷಧ ಗುರುವನು ಸ್ಮರಿಸಿ ಆಲಸ್ಯಗೈಯದೆ ಬಂದವ ನುಡಿಯೆ ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ ಶೈಲದ ಸ್ವಾಮಿ ವರಾಹನು ಸಿಗುತ ಕೇಳಲು ವೆಂಕಟ ಕಥೆ ವಿಸ್ತಾರ ಪೇಳಲು ತಬ್ಬಿದ ಕ್ರೋಡನ ಚತುರ 12 ಏನಿದು ಬಹು ವಿಪರೀತವು ಪೇಳಿ ಸತಿ ಬಿಟ್ಟಲೆಯುವುದೆಂತು ಪೂರ್ಣಾನಂದಗೆ ಗೊಲ್ಲನ ಪೆಟ್ಟೆ ಚಿನ್ಮಯ ನೆತ್ತರು ಚಿಮ್ಮುವದುಂಟೆ ಕ್ಷುಧೆ ತೃಷೆ ದೂರಗೆ ಹಾಲು ಅನ್ಯರು ವೈದ್ಯರೆ ಧನ್ವಂತ್ರೀಗೆ ಕಾಣನೆ ಔಷಧಿ ಪೂರ್ಣಪ್ರಜ್ಞ ತಾನಿರೆ ವೆಂಕಟ ತಿಳಿಯನೆ ಕ್ರೋಡ 13 ಲೀಲೆ ಇದೆಲ್ಲವು ಕೊಡುವದವಗೆ ಬೀಳಿಸಿ ಮೋಹದಿ ಕುಜನರ ತರಿವ ಪಾಲಿಪ ಸುಜನರ ಬೀರುತ ಜ್ಞಾನ ಲೀಲಾಮಯನವ ಸರಿಯೆಂತೆನ್ನಿ ಕೇಳಲು ಕ್ರೋಡನ ವಾಸಿಸೆ ಜಾಗ ಕೇಳುವರಾರೈ ನೀನಿರೆ ಯನ್ನ ಬೀಳುವರೆಲ್ಲರು ನಿನ್ನಡಿಭರದಿ ಧಾಳಿಯೆ ನನ್ನಯ ಪ್ರಭುತನವೆಂದ 14 ಮುಂದೆಯೆ ನೀನಿರು ನಾಹಿಂದಿರುವೆ ಬಂದವರೆಲ್ಲರು ನಿನಗೊಂದಿಸುತ ವಂದಿಸಲೆನ್ನದು ವಲಿಯುವೆನಾಗ ಮುಂದಿಹ ನಿನಗೇ ಮೊದಲಲಿ ಪೂಜೆ ಛಂದದಿ ಶಾಸನ ಹೀಗೇ ಬರದು ಮಂದಿರ ಕೆಡೆ ಕೊಡು ಎನ್ನಲು ನಗುತ ನಂದದಿ ನೀಡುತ ಹಾಗೆಯೆ ಎಲ್ಲ ಕಂದನ ಸೇವಿಸೆ ಬಕುಳೆಯ ಕೊಟ್ಟ 15 ತಗ್ಗಿರೆ ಸಾಧನ ವೆಗ್ಗಳಗೈವ ವೆಗ್ಗಳ ಸಾಧನೆ ತಗ್ಗಿಪ ದೈವ ಹಗ್ಗವು ಸರಿಇವ ನಿಚ್ಚೆಯು ಕೇಳಿ ಅಗ್ಗದ ಪ್ರಭುವರ ಇವತಾನಲ್ಲ ತಗ್ಗಿಸಿ ವಿಷಯ ಬಗ್ಗಿಸಿ ಮನವನು ಹಿಗ್ಗುತ ಭಜಿಸಲು ಚರಣ ಸರೋಜವ ತಗ್ಗದ ಸೌಖ್ಯವ ನೀಡುತ ಕಾವ ಮುಗ್ಗದೆ ಭವದಲಿ ಭಜಿಸಿರಿ ಬೇಗ 16 ಬಕುಳೆ ಯಶೋದೆಯು ಪೂರ್ವದಿ ಕೇಳಿ ರುಕ್ಮಿಣಿ ಮುದುವೆಯ ನೋಡದಲಾಕೆ ಉಕ್ಕಿದ ಮೋಹದಿ ಬಯಸಲು ನೋಡೆ ಭಕ್ತಳ ಬಯಕೆಯ ಸಿದ್ಧಿಸೆ ದೇವ ಬಕುಳೆಯ ಜನ್ಮದಿ ನಿಂದಿಹಳೆಂದು ಅಕ್ಕರೆಯಿಂದಲಿ ತಾ ಕರತಂದು ಚೊಕ್ಕಸುಕಂದನ ತೆರದಲಿ ನಿಂದ ಭಕ್ತಿಲಿ ಸೇವೆಯ ಗೈದಳು ಬಕುಳೆ 17 ನಾರಾಯಣ ಪುರ ನಾಮದ ನಗರಕೆ ದೊರೆಯೆನಿಸಿದ್ದನು ಆಕಾಶರಾಯ ಕೊರಗುತ ಬಹುದಿನ ಸುತರಿಲ್ಲೆಂದು ಧರಣಿಯ ಶೋಧಿಸೆ ಯಾಗಕ್ಕೆಂದು ದೊರಕಲು ಕಮಲವು ದೊಡ್ಡದು ಒಂದು ತೆರೆಯುತ ನೋಡಲು ಶಿಶು ತಾನೊಂದು ಬೀರುತ ಕಾಂತಿಯ ಕಾಣಿಸಲಂದು ದೊರಕಿತು ಕನ್ಯಾಮಣಿಯೆಂತೆಂದು 18 ಅರಮನೆ ಗಾ ಶಿಶು ಹರುಷದಿ ತಂದು ಸರಸಿಜಮುಖಿ ಪದ್ಮಾವತಿಯೆಂದು ಕರೆಯುತ ರಾಣಿಯು ಸಾಕುತ ಬಂದು ವರುಷಗಳುರುಳಲು ಕಾಲದಿ ಕನ್ಯೆ ಸಿರಿತೆರ ಲಕ್ಷಣ ಗಣದಿಂ ಬೆಳೆಯೆ ವರಿಸಲು ಈಕೆಯ ನರರಿಂದಾಗದು ಹರಿಯೇ ಸರಿವರವೆನ್ನುತ ಮನದಿ ಅರಸುತ ವರನಂ ಬಳಲಿದ ಧೊರೆಯು 19 ವೇದವತೀ ಈಕೆಯು ತ್ರೇತೆಯಲೆನ್ನಿ ಮಾಧವ ಮನತೆರ ತೆರಳುವ ಸೀತೆ ಮೋದದಿ ಸೇರಲ್ ಗಿರಿ ಕೈಲಾಸ ಖÉೀದಗಳುಣ್ಣುತ ಲಂಕೆಯಲಿದ್ದು ಸಾಧಿಸಿ ಖಳರವಿನಾಶವನಲ್ಲಿ ಮೇದಿನಿ ಸುತೆಯಳ ಸೇವಿಸಿ ಬಹಳ ಮೋದದಲಾಗಲಿಯಂದಳು ಸೀತೆ 20 ಶಕ್ರನು ಶಿಖಿಸಹ ಇದ್ದಹಾಗೆ ಲೋಕಕೆ ತೋರಲು ಸೀತೆಯ ರಾಮ ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ ತಕ್ಕಣ ಬಂದರು ಸೀತೆಯರಿಬ್ಬರು ಅಕ್ಕರೆಯಿಂದಲಿ ನುಡಿಯುತ ಕಥೆಯು ಸಕ್ಕದಿ ನಿಂತಿಹ ಈಕೆಯ ನೀನು ಈಕ್ಷಿಸಿ ಪಿಡಿಕೈಯೆನ್ನಲು ಸೀತೆ ರಕ್ಕಸ ವೈರಿಯು ಮಡದಿಗೆ ನುಡಿದ 21 ಒಂದೇ ಬಾಣವು ಒಂದೇ ವಚನವು ಒಂದೇ ನಡತೆಯು ಒಬ್ಬಳುಮಡದಿ ಇಂದೆನಗೆಂಬುದು ತಿಳಿಯದೆ ನಿನಗೆ ಛಂದದಿ ಕಲಿಯಲಿ ನಡಿಸುವೆ ಬಯಕೆ ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ ಇಂದಿನ ಯುಗದಲಿಯನ್ನಲು ರಾಮ ವಂದಿಸಿ ನಡೆದರು ಎಲ್ಲರು ಆಗ ಹಿಂದಿನ ವರತೆರ ಬಂದಿಹಳೀಗ 22 ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ ಭಾಷೆಯ ಪಡದಿರೆ ಸವತಿಯ ಪಟ್ಟಕೆ ಘಾಸಿಯ ನೀಡುತ ರಾವಣ ಬಂದು ಆಶಿಸಿ ಸಂಗವ ದುಡುಕುತ ನುಡಿಯೆ ರೋಷದಿ ಶಾಪವ ನೀಡಿದಳೀಕೆ ನಾಶಕೆ ಕಾರಣಳಾಗುವೆ ನಾನೆ ಭ್ರಷ್ಟನೆಯೆನ್ನುತ ಶಿಖಿ ಸೇರಿದಳು 23 ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ ಲಕ್ಷಣ ನಿಭಿಡಿತಳಾಗಿಹ ಕನ್ಯೆ ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ ಪಂಕಜ ನೇತ್ರೆಯು ಪಂಕಜವದನೆಯು ಪಂಕಜ ಗಂಧಿ ಭುಜಂಗ ಸುವೇಣಿ ಶಂಕರ ನಗೆನುಡಿ ಗುರುಲಾವಣ್ಯ ಶಂಖ ಸುಪದ್ಮಾರೇಖೆಗಳಿಂದ ಲಂಕೃತ ಅಂಗೈ ಪಾದಗಳ್ಹಾಗೆ 24 ಕಾಮನ ಬಿಲ್ಲನು ಹಳಿಯುವ ಹುಬ್ಬು ಸೋಮನ ಮೀರಿಪ ಯುಗಯುಗ ಕಾಂತಿ ಸಾಮಜಗಮನೆ ರಂಭೋರುಗಳು ಕೋಮಲ ಚಂಪಕ ನಾಶಿಕ ತುಟಿಗಳು ಕಾಮದ ಪೀವರ ಕುಚಯುಗಹಾಗೆ ಸು ನೇಮದಿ ಬೆಳದಿಹ ಪಲ್ಗಳ ರಾಜಿ ವಾಮನಿತಂಬಜಘನದ್ವಯವ ಭಾಮೆ ಸಫಾಲದಿ ಮೆರೆದಳು ತಾನು 25 ಈಕೆಯು ಕಮಲೆಯ ತೆರೆದಿಂ ಬೆಳೆದು ಸಾಕಲು ಕರೆದಳು ಕನಕಸುವೃಷ್ಟಿ ಕಾಕನು ಕಾಣದೆ ರಾಜನು ಮೆರೆದ ನಾಕವೆ ಎನಿಸಿತು ರಾಜನಮನೆಯು ಜೋಕೆಯಲೊಂದಿನ ಸಖಿಯರ ಕೂಡಿ ಈಕ್ಷಿಸೆ ಪುರವುದ್ಯಾನವ ಕುವರಿ ಸೌಖ್ಯದಿ ತೆರಳುತೆಯಿರುತಿರುವಲ್ಲಿ ನಾಕದ ನಾರದ ವದಗಿದನಲ್ಲಿ 26 ಹರಿಕಾರ್ಯಾಂಗನು ಬಂದನು ಎನ್ನುತ ಗುರು ಸತ್ಕಾರಂಗಳಗೈದು-ಆ ತುರ ತೋರಲು ತಿಳಿಯೆ ಭವಿಷ್ಯ ಕರಗಳ ನೋಡುತ ತೂಗುತ ತಲೆಯು ಸಿರಿತೆರ ಲಕ್ಷಣ ಕಾಣುವೆನಮ್ಮ ಹರಿಯೇ ಸರಿ ವರಿಸಲ್ ನಿನ್ನ ಅರಸುತ ಬರುವನು ತಾನೆ ನಿನ್ನ ಬರಿ ಮಾತಲ್ಲವು ನೋಡೆಂತೆಂದ 27 ಪರಿ ಹೊರಡಲ್ ಮುನಿಯು ಲಾಲಿಸಿ ª
--------------
ಕೃಷ್ಣವಿಠಲದಾಸರು
ಶ್ರೀರಂಗನಾಥ ನಂಬಿದೇ ನಿನ್ನ ನಾನೇ ಅನಾಥ ಪ ಅನಾಥರಕ್ಷಕ ಎನ್ನಾ ಪ್ರೀತಿಯಿಂದಲೆ ಕಾಯೊ ಲೋ ಕನಾಥನೆಂದು ಬಂದು ನಂಬಿದೆ ನಿನ್ನ ಅ.ಪ ನಿಮ್ಮ ರಘುಪತಿ ನಿಮ್ಮ ವಿಭೀಷಣಗೆ ಕೊಡಲು ತಾಮುನ್ನಾ ಶ್ರೀರಂಗಕ್ಷೇತ್ರದಿ ನೆಲಸಿ ಸಂತೋಷದಿ ಧರ್ಮವರ್ಮಾದಿ ಚೋಳೇಂದ್ರ ಪೂಜಿತಪಾದ 1 ಕಂದ ಪ್ರಹ್ಲಾದ ಕರೆಯೆ ಕಂಬದಿಂದಲೆ ಬೇಗ ಬಂದು ಅವನ ತಂದೆಯನು ಸಂಹರಿಸಿದೆ ಕಂದನ ಕಾಯ್ದ ಗೋವಿಂದ ರಕ್ಷಿಸೊ ಎನ್ನ 2 ಅಜಮಿಳ ಕರೆಯೆ ಆಪತ್ತಿಗೆ ಬಂದು ನೀನೊದಗೆ ನಿಜಸ್ಮರಣೆ ಮಾತ್ರದಲವನ ದುರಿತವೆಲ್ಲವ ಕಳೆದು ನಿಜ ಪಾದವನಿತ್ತೆ ಕರುಣದಿಂದಲೆ ರಂಗ 3 ಕಂದ ಧ್ರುವ ತಾನು ಅಡವಿಯಲಿ ನಿಂತು ತಪವನು ಚಂದದಿ ಮಾಡಲು ಬಂದು ಸೇವೆಯನಿತ್ತೆ ಆ ನಂದಪದವನಿತ್ತ ಸುಂದರಾಯನೆ ನೀನು 4 ಅರ್ಕಸುತನಾಗ ನಿಮ್ಮನ್ನು ಸೇರಿ ಸೌಖ್ಯವ ಬೇಗ ಮಾಡೆ ಸೊಕ್ಕಿದ ವಾಲಿಯನೊಂದು ಬಾಣದಿಂ ಕೊಂದು ಮರ್ಕಟಗೆ ರಾಜ್ಯವನಿತ್ತ ರಂಗಯ್ಯ ನೀನು5 ಮಕರಿ ಕಾಲ್ಪಿಡಿಯೆ ಮತಂಗಜ ನಿಮ್ಮನು ಕರೆಯೆ ನಕ್ರವ ಕೊಂದು ಚಕ್ರದಿ ಅತಿವೇಗದಿಂ ಕರಿಯ ರಕ್ಷಿಸೆ ಬಂದೆ ಕರುಣದಿಂದೆ 6 ಭವಕೆ ನಾ ಬೆದರಿ ಬಂದೆನೊರಂಗ ಕಾಯೋ ನೀ ಭವದಿ ಈಶಣತ್ರಯವನ್ನು ಬಿಡಿಸಿ ನಿನ್ನಯ ಪಾ ದವಾಸವ ಮಾಡಿಸೊ ವಾಸುಕಿಶಯನನೆ 7 ಆರುಜನ ಕಳ್ಳರು ಎನ್ನಲಿ ಸೇರಿ ಬಾಧಿಸುತಿಹರು ದೂರಮಾಡವರನ್ನು ಸೇರಿಹೃದಯದಲ್ಲಿ ಶ್ರೀನಿವಾಸನೆ ನಿಮ್ಮ ಪಾದದೊಳಿರಿಸೆನ್ನ 8
--------------
ಯದುಗಿರಿಯಮ್ಮ
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ