ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜೋ ಗುಂಡ ಪರಮಪ್ರಚಂಡ ಜೋ ಜೋ ಜೋ ಗುಂಡ ಸುರಚಿರದಂಡ ಪ ಜೋ ಜೋ ಜೋ ದೊಡ್ಡ ಕರಿಯಕಲ್ಗುಂಡ ಜೋ ಜೋ ಜೋ ಮದ್ದನರೆಯಚ್ಚಗುಂಡ ಅ.ಪ ದುಂಡು ಮಲ್ಲಿಗೆಗಿಂತ ಮೃದುವಾದ ಗುಂಡಾ ಕೆಂಡ ಸಂಪಿಗೆಗಿಂತ ಚೆಲುವಾದ ಗುಂಡಾ ಪುಂಡರೀಕಕ್ಕಿಂತ ಚೆಲುವಾದ ಗುಂಡಾ ಮೊಂಡ ಮೂಕರಕಯ್ಯ ಕೋದಂಡಗುಂಡಾ 1 ಒಬ್ಬಿಟ್ಟು ಹೂರಣವರೆಯುವ ಗುಂಡಾ ತಬ್ಬಿಬ್ಬಾಡುವರನು ಕಡುಗುವಾ ಗುಂಡಾ ರುಬ್ಬಿ ರುಬ್ಬಿ ದೋಸೆ ಯೀಯುವಾ ಗುಂಡಾ ಕೊಬ್ಬಿದ ಜನವನು ದಬ್ಬುವಾ ಗುಂಡಾ 2 ಪರಿಪರಿ ಬಂಧನವರಿಯದ ಗುಂಡಾ ಉರುಳಿಸಿದಲ್ಲಿಯೇ ನಿದ್ರಿಪ ಗುಂಡಾ [ವರಭಕ್ತಾವಳಿಗೆ ಸುಖವೀವಗುಂಡಾ] 3 ನೀನಿಲ್ಲದಿರುವ ಮನೆಗಳಿಲ್ಲ ಗುಂಡಾ ನೀನಿರುವಲ್ಲಿ ತಿಂಡಿಗಳುಂಟು ಗುಂಡಾ ಕಾನನದೊಳಗಿದ್ದು ಕರಗದ ಗುಂಡಾ ಮಾನವ ಗಣಕ್ಕೆಲ್ಲಾ ಬೇಕಾದ ಗುಂಡಾ4 ಒರಳುಕಲ್ಲಿನ ಮೇಲೆ ನೇಯುವಾ ಗುಂಡಾ ತರುಣಿಯ ಕರದೊಳು ನಲಿಯುವಾ ಗುಂಡಾ ವರ ದುಕೂಲಂಗಳ ಬಯಸದ ಗುಂಡಾ ವರದ ಮಾಂಗಿರಿರಂಗನೆನಿಸುವ ಗುಂಡಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾಲನಮ್ಮ ಬಾಲಕೃಷ್ಣ ಬಹಳ ಮಾಯಕಾರನೀತ ಪ ಬಾಲನೀನೆ ಗೋಪಾಲ ನೀಲಶ್ಯಾಮ ವನಮಾಲ ಬಾಲನಂತೆ ಕಣ್ಗೆತೋರಿ ಆಲಯ ಗೌಪ್ಯದಿಂದ ದೂರಿ ಅಧರ ಸುರಿವ ಅ.ಪ ಮಿಂದು ಮಡಿಯನುಟ್ಟಾನಂದದಿ ಶೋಭಿಸುವ ಅಂದಮಾದ ಹಂಸತಲ್ಪದಿ ಪವಡಿಸಿರುವ ಇಂದು ಮುಖಿಯವರ ಬಳಿಗೆ ಮುದದಿ ಮಂದಹಾಸದಿ ಮೋಹ ಮಾತನಾಡಿ ಬಾಧಿಸಿ ಕಂದರ್ಪನ್ಹೇವದಿ ಸುಲಿದುಕೊಂಡವ 1 ನಲಿನಲಿದು ಬೀಳುತೇಳುತ ಲಲನೆಯರಿಗೀ ಸುಲಿಯಪಲ್ಲು ತೋರಿನಗುತ ದಾರಿ ತರುಬಿ ಚೆಲುವಾದಾಟಗಳನೆ ಆಡುತ ಕೊಳಲನೂದುತ ಅರಿವು ಮರವೆಮಾಡಿ ತಿಳಿಯದ್ಹಾಗೆ ಘಳಿಲಿನ್ಹಾರಿ ಎಳೆದು ಏಕಾಂತಸ್ಥಳಕ್ಕೊಯ್ದು ಹಲವು ಕ್ರೀಡದಿಕಳೆಯ ಸೆಳೆದು ಗಲ್ಲಕಚ್ಚುವ ಜಿಗಿದು ಓಡುವ 2 ಹಿತದಿ ಆಡುವ ಸುತರ ಕೆಣಕುವ ಬಿಡಿಸಲ್ಹೋದ ಸತಿಯರ ಮೈಮೇಲೆ ಬರುವ ಸಣ್ಣವನೇನೇ ಪತಿ ನಾ ನಿಮಗೆಂದ್ಯವ್ವನ ತಾಳುವ ವ್ಯಥೆಯಬಡಿಸುವ ಮೀಸಲು ಮುರಿಸಿ ದೇವರು ತಾನೆಯೆನಿಸಿ ಪತಿತ ಶ್ರೀರಾಮ 3
--------------
ರಾಮದಾಸರು
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ