ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊ. ವಿಶಿಷ್ಟ ಹಾಡುಗಳು ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ ಕೋಲುಗಾರನೊಬ್ಬನಲ್ಲಿ ಹೊರಟನಂತೆ ಬೇಳುವ ಶಂಖದ ಧ್ವನಿಯ ತೋರ್ಪನಂತೆ ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ 1 ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ ಸಾರಿ ಬಂದ ದೂತರಿಂಗೆ ಲಂಚ ನಡೆಯದು ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು ಸಾರಿ ಕಂಡು ಬದುಕುವರೆ ದಾರಿವೊಳ್ಳೆದು 2 ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ ಸದರ ಬಡ್ಡಿಯಿಂದ ಬರೆದು ಚದುರತನದಲಿ ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ 3 ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು 4 ಗಂಧಿಕಾರನಂಗಡಿ ಗೋವಿಂದನಲ್ಲಿ ಚಂದದ ಔಷಧವನ್ನು ತಿಂಬೆವಲ್ಲಿ ಬಂದ ಭವದ ರೋಗ ಕೊಂದೆವಲ್ಲಿ ಆತ ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ 5 ಸಾಲವನ್ನು ತಿದ್ದಿ ಮುದದ ಸಾಲವನ್ನು ನಾಲಿಗೆಯ ಪತ್ರದಿಂದ ತಂದೆವಿನ್ನು ನೀಲದ ಮಣಿಯನೊಂದ ಕದ್ದುದನ್ನು ಆಲಿಯೊಳಗಿಟ್ಟುಕೊಂಡು ಬಂದುದನ್ನು 6 ಅಂಗಡಿ ಗೋವಿಂದ ಬಹಳ ಅಂಗವುಳ್ಳವ ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ ಮುಂಗುಡಿಯ ಜನಕೆ ಅಂತರಂಗ ಕೊಡುವವ 7 ದಾಸರಿಗೆ ಧರ್ಮವನ್ನು ಕೊಡುವನಲ್ಲದೆ ಕಾಸು ಹೊರತು ಮೀಸಲನ್ನ ನೀಡಲರಿಯನು ಶೇಷಗಿರಿಯವಾಸನೆಂದು ಹಾಸಿಕೊಂಬನು ಬೇಸರನ್ನು ಕಂಡು ಸಂತೋಷವೀವನು 8 ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ 9
--------------
ವರಹತಿಮ್ಮಪ್ಪ
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು