(ಊ) ಲೋಕನೀತಿಯ ಕೃತಿಗಳು
ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು
ಭ್ರಷ್ಟನೆನಿಸದೆ ಬಿಡವು ಇವನ ಪ
ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ
ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ
ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು
ಹರಿಯಿಂದ ಹತನಾಗಿ ಹೋದಾ
ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ
ತರಿದನಲ್ಲವೆ ಭೀಮ ತಾನು 1
ದಾಯವನು ಲೋಭದಿಂ ಕೌರವನು ಪಾಂಡವರಿ
ಗೀಯದುದಕವನೇನು ಪಡೆದಾ
ರಾಯದಶರಥ ತನ್ನ ಸತಿಸುತರ ಮೋಹವಿರೆ
ಆಯುವಿಂ ಗತನಾಗಿ ಹೋದಾ 2
ಜಮದಗ್ನಿಯ ಹೋಮಧೇನುವಂ ಮದದಿಂದೆ
ಕಾರ್ತಿವೀರ್ಯಾರ್ಜುನನು ಕೊಳಲು
ಅಮಿತಬಲನಾಪರಶುಧಾರಿಯು ತಾನು
ಸಮರದೊಳೆ ಸವರುತ್ತ ಅವನ ಕಳೆದ3
ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು
ವಿಷ್ಣುಚಕ್ರವು ಕೊಂದಿತವನ
ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ
ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4
ವಾಸುದೇವನ ಮೇಲಸೂಯೆಯಿಂ ಪೌಂಡ್ರಕ
ವಾಸುದೇವನೊಳು ಅಳಿದ ಕಂಡ್ಯಾ
ದೂಷಣೆಯು ಡಂಬಗಳು ನಾಶನವ ಗೈಯುವುವು
ಈಶ ಸುಜನರಿಗಾಗಿ ಭಾವಿಸುವ ಜಗದೀ5
ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ
ಅಪಹಾರಗೈದ ಶ್ರೀರಾಮ ತಲೆಯಾ
ರಿಪುಗಳಾ ಮಧು ಕೈಟಭರ ಮಮತೆಯನು
ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6
ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ
ಸರ್ವವೂ ಹೆಜ್ಜಾಜಿ ಕೇಶವಾ ಯೆಂದು
ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ
ಒರ್ವನೇ ಜಗದೀಶನೆಂದು ನಮಿಸೀ 7