ದ್ವಾದಶನಾಮ ನಿರ್ವಚನ
ಶ್ರೀಕೃಷ್ಣ ನಿನ್ನ ಚರಣಾರವಿಂದಕ್ಕೆರಗಿ
ಭಕುತಿಯಿಂ ನಿನ್ನ ಪನ್ನೆರಡು ರೂಪಗಳ
ನಾಮ ನಿರ್ವಚನದಿಂ ಕೂಡಿ ನುತಿಸುವೆ ನಾನು
ಸರ್ವಸಿದ್ಧಿಯನ್ನಿತ್ತು ಕಾಪಾಡು ಹರಿಯೆ 18
ಸೃಷ್ಟಿಲಯಕಾರಿಗಳು ಬೊಮ್ಮರುದ್ರರು ಇವರೆ
ಕೇಶವೆಂಬಕ್ಷರದಿ ಮೆರೆಯುತ್ತಲಿಹರು
ವರ್ತನವು ಯಾರಿಂದಲಹುದವನೆ ಪರದೇವ
ಕೇಶವಾತ್ಮಕನವನು ಶ್ರೀಕೃಷ್ಣ ದೇವ 19
ನಾರವೆಂದರೆ ದೋಷ ಲೇಶವಿಲ್ಲದ ಗುಣವು
ನಾರವೆಂದರೆ ನೀರು ಜೀವನಾಧಾರ
ನಾರವಯನವು ಯಾರಿಗವನೆ ನಾರಾಯಣನು
ರಜತಪೀಠದ ಪುರದ ಪರದೈವವವನು 20
ಮಾಧವನು ಮಾಲಕುಮಿಗೊಡೆಯನವ ಪರಮಾತ್ಮ
ಮಾಯೆಯನು ಎದೆಯಲ್ಲಿ ತಾಳ್ದ ಸಿರಿವರನು
ಮಾಯೆಯಿಂದಲಿ ಮಾನವಗೆ ಮುಸುಕನು ಹಾಕಿ
ತನ್ನ ರೂಪವನಾರು ನೋಡದಂತಿಹನು 21
ಹಿರಿ ಬೆಟ್ಟವನು ತಾನು ಕಿರಿ ಬೆಟ್ಟಿನಲಿ ಹೊತ್ತು
ಗೋವುಗಳ ರಕ್ಷಿಸಿದ ಗೋಪಾಲ ನೀನು
ವೇದರಕ್ಷಕನಾಗಿ ಗೋವಿಂದನೆನಿಸಿರುವೆ
ಶ್ರೀಕೃಷ್ಣ ನಿನ್ನ ಮಹಿಮೆಯನೇನ ಪೇಳ್ವೆ 22
ಚೇಷ್ಟಕನು ಬಲರೂಪನಾಗಿರುವ ಕಾರಣದಿ
ವಿಶ್ವದಲ್ಲೆಲ್ಲು ವ್ಯಾಪಿಸಿರುವುದರಿಂ
ವಿಷ್ಣುನಾಮದ ನೀನು ವೈಷ್ಣವರ ಕುಲದೊಡೆಯ
ಮಧ್ವಹೃನ್ಮಂದಿರದ ನೆಲೆಯಲ್ಲಿ ಇರುವೆ 23
ಮಧುವೆಂಬ ದೈತ್ಯನನು ಸೃಜಿಸಿಯವನನು ಕೊಂದು
ಮಧುಸೂದನನು ಎಂಬ ಬಿರುದು ನೀ ಪೊತ್ತೆ
ದುರ್ಜನರ ಸಂಹಾರ ಸಜ್ಜನರ ಉದ್ಧಾರ
ಎಂಬೆರಡು ಕಾರ್ಯಗಳಿಗಾಗಿಯವತಾರ 24
ತ್ರೈವಿಕ್ರಮಾವತಾರವ ತಾಳ್ದು ದೇವ
ಕಾಲ ತೊಳೆದು
ಮೂರು ಲೋಕದ ಭಕುತರಿಗೆ ದರ್ಶನವ ಕೊಟ್ಟು
ಭಕ್ತರಕ್ಷಕನಾಗಿ ಮೆರೆದೆ ಸಿರಿವರನೆ25
ವಾಮನನು ನೀನಾಗಿ ವಾಮಪಂಥದಿ ಹೋಗಿ
ಬಲಿ ಚಕ್ರವರ್ತಿಯಲಿ ಮೂಹೆಜ್ಜೆ ಬೇಡೆ
ಭಕುತಿಯಿಂದವ ಕೊಡಲು ಮುಕುತಿಯನು ಕೊಡಲೆಂದು
ಬಲಿಯ ಮನೆಯೂಳಿಗವ ಗೈದೆ ಪರಮಾತ್ಮ26
ಸಿರಿಯನೆದೆಯಲಿ ಪೊತ್ತು ಶ್ರೀಧರನು ನೀನಾಗಿ
ಸರ್ವ ಭೂಷಣಗಳಿಂ ಶೋಭಿಸುತಲಿರುವೆ
ಅನ್ನದಾತನು ನೀನು ಅನ್ನಭೋಕ್ತøವು ನೀನು
ಭುಕ್ತಿ ಮುಕ್ತಿ ಪ್ರದನು ನೀನಿರುವೆ ದೇವ 27
ಇಂದ್ರಿಯಗಳು ಹೃಷೀಕಾಭಿಧಾನದಲಿಹವು
ನೀನವುಗಳಿಗೆ ಎಲ್ಲ ಒಡೆಯನಾಗಿರುವೆ
ಹೃಷೀಕೇಶ ನಾಮವದು ನಿನಗೊಪ್ಪುವದು ಹರಿಯೆ
ನನ್ನ ಮನ ನಿನ್ನಡಿಯೊಳಿರುವಂತೆ ಮಾಡು28
ಸಾಗರವನುದರದಲ್ಲಿರಿಸಿ ನೀನದರಿಂದ
ನಾಭಿಯಲಿ ಪದುಮವನು ಸೃಷ್ಟಿಸಿದೆ ದೇವಾ
ಪದುಮನಾಭನು ನೀನು ಬೊಮ್ಮಪಿತನಾಗಿರುವೆ
ಮಾಯಾ ರೂಪವನೇನಪೇಳ್ವೆ29
ಮೊಸರ ಕುಡಿಕೆಯನೊಡೆದು ತಾಯಿಯಿಂ ಬಂಧಿತನು
ದಾಮೋದರನು ಎನಿಸಿ ಉಜಡೆಯನ್ನೊಯ್ದು
ಮರಗಳೆಡೆಯಲಿ ಪೊಕ್ಕು ಬೀಳಿಸುತಲವುಗಳನು
ಭಕುತರಾ ಶಾಪಮೋಚನೆಯ ನೀ ಮಾಡ್ದೆ30
ಕೇಶವನೆ ಮೊದಲಾದ ಪನ್ನೆರಡು ನಾಮಗಳ
ಅರ್ಥವರಿತನವರತ ಪೇಳಲವಗೊಲಿದು
ಸಂಸಾರ ಬಂಧನವ ತೊಲಗಿಸಿಯೆ ಪರಮಾತ್ಮ
ತನ್ನ ಬಳಿಗೊಯ್ಯುವನು ನಿಜ ಪೇಳ್ವೆ ನಾನು31
ಶ್ವೇತ ರಕ್ತವು ಪೀತ ಕೃಷ್ಣ ವರ್ಣಗಳೆಂಬ
ನಾಲ್ಕು ಬಣ್ಣದ ದೇವನೊಬ್ಬನೇ ಇಹನು
ಕಲಿಯುಗದ ಕಾಲದಲಿ ಕೃಷ್ಣನೊಬ್ಬನ ನೆನೆದು
ನಾಮಜಪ ಮಾಡಿದರೆ ಮುಕ್ತಿಯನು ಕೊಡುವ 32