ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ
ಗೆಲಿಯಬಲ್ಲವರಾರು ಮೂಜಗದಿ ಪ
ಗೆಲಿಯಬಲ್ಲವರಾರು ಮೂಜಗದೊಳಗೆ
ಬಲ್ಲಿದರೆಂಬರೆಲ್ಲರು
ಜಲಜಪೀಠನ ಲಿಪಿಗೆ ಸಿಲ್ಕಿ
ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ
ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ
ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ
ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ
ಒಂದು ಪಾಪಾಚರಣೆಗೈಯದೆ
ಒಂದು ಬಿಡಿದಖಿಲ್ವಿದ್ಯವರಿದ
ಒಂದು ಅರಿಯದೆ ತನ್ನ ಕೈಕಾಲು
ಒಂದೇ ಮಾತಿಗೆ ಕಳೆದುಕೊಂಡ 1
ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ
ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ
ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ
ಎರಡು ಮಕ್ಕಳ ವನದಿ ಅಗಲಿದ
ಎರಡನರಿಯದೆ ಮಲಗಿದರಸಿಯ
ಎರಡನೆಬಗೆದಡವಿಯಲಿ ಬಿಟ್ಟು
ಎರಡನೇರಾಯನಶ್ವ ತಿರುವಿದ 2
ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ
ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ
ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ
ಮೂರುಮಂದಿ ಶಕ್ತಿಯರಿಗೆ
ಮೂರು ಬಟ್ಟೆಯ ಸುದ್ದಿ ಪೇಳಿ
ಮೂರು ಮೂರ್ತಿಗಳುಪಾಯನರಿಯದೆ
ಮೂರಿಪ್ಪತ್ತು ಮಕ್ಕಳ್ಹಡದ 3
ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ
ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು
ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು
ನಾಲ್ಕುಭುಜನ ಸುರನೆಂದೆನಿಸಿ
ನಾಲ್ಕು ವಿಧ ಮತಿವಂತನಾದವ
ನಾಲ್ಕು ಒಂದು ಮುಖ ಮೊದಲಿಗಿರ್ದನು
ನಾಲ್ಕೆ ಮುಖದವನೆನಿಸಿಕೊಂಡು 4
ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು
ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ
ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ
ಐದು ಒಂದು ಮುಖದವನಿಂ ತಾರಕ
ನೈದುವಂದುದಲ್ಲೆ ಸೀಳಿಸಿ
ದೈದುತತ್ವಕಾಲಯೆನಿಸಿದ
ಐದುಮುಖಸ್ಮಶಾನ ಸೇರಿದ 5
ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ
ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು
ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ
ಆರುನಾಲ್ಕು ಭುಜನ ಮೊರೆ ಕೇ
ಳಾರುನಾಲ್ಕು ಶಿರನ ವಧಿಸಿದ
ಆರುನಾಲ್ಕರಗಧಿಕನೆನಿಸಿ
ಆರುನಾಲ್ಕವತಾರ ತಾಳಿದ 6
ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು
ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ
ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ
ವಾರಿಜನು ಬರೆದ ಬರೆಹ
ಮೀರಿ ನಡೆದೇನೆಂದರಿನ್ನು
ಸಾರಮೋಕ್ಷಕ್ಕಧಿಪ ನಮ್ಮ
ಧೀರಪ್ರಭು ಶ್ರೀರಾಮ ಬಲ್ಲ 7