ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಅಂತರ್ಯಾಮಿ ಶ್ರೀನಿವಾಸ ಸಿರಿರಮಣ ಶ್ರೀ ಕೃಷ್ಣ ಶ್ರೀನಿಧಿಯೆ ಶ್ರೀಶ ಪ. ಸೃಷ್ಟಿಕರ್ತನೆ ನಿನ್ನ ಲಕ್ಷಿದೇವಿಯು ಸತತ ಶ್ರೇಷ್ಠತನದಲ್ಲಿ ಪೂಜೆ ಮಾಡುತಿಹಳೊ ಅಷ್ಟು ದೇವತೆಗಳು ಆಗಮವನನುಸರಿಸಿ ಶಿಷ್ಟೇಷ್ಟನೆಂತೆಂದು ಪೂಜೆ ಮಾಡುವರೋ 1 ಅಣು ನಾನು ನಿನ್ನ ಅರ್ಚಿಸ ಬಲ್ಲೆನೇ ದೇವ ಘನಮಹಿಮ ಸ್ವೀಕರಿಸೊ ಅಲ್ಪ ಸೇವೆ ಮನ ಮಂದಿರದಿ ನಿಂತು ಅನುಗಾಲ ನಿನ್ನ ದಿವ್ಯ ಘನ ಮೂರ್ತಿಯನೆ ತೋರೋ ಪೂಜೆ ಮಾಡುವೆನೊ 2 ಸರಸಿಜಾಕ್ಷನೆ ನಿನಗೆ ಸರಸದಿಂದ ಗುಲಾಬಿ ಸರದ ಪೂಮಾಲೆಯನು ಕೊರಳಿಗ್ಹಾಕುವೆನೊ ಸುರರ ಪಾಲಿಪ ಹರಿಯೆ ಸುರಹೊನ್ನೆ ಹಾರವನು ಕರ ಚಕ್ರಯುತ ನಿನ್ನ ಕಂಧರದಿ ಧರಿಸೋ 3 ಶ್ಯಾಮವರ್ಣನೆ ರತ್ನಹಾರಗಳು ಹೊಳೆಯುತಿರೆ ಶ್ರೀ ಮನೋಹರ ಮುತ್ತಿನ್ಹಾರ ಪದಕಗಳು ಈ ಮಧ್ಯೆ ದಿವ್ಯ ಶ್ಯಾವಂತಿಗೆ ಸುಮನದಿಂ ಕಾಮಜನಕನೆ ಮಾಲೆಕಟ್ಟಿ ಹಾಕುವೆನೊ 4 ಈ ಜಗವ ಉದರದಲಿ ಧರಿಸಿ ಮೆರೆಯುವ ದೇವ ಜಾಜಿ ಪೂಮಾಲೆಯನು ಕಂಧರದಿ ಧರಿಸೊ ಭೋಜಕುಲ ತಿಲಕನೆ ಕೆಂಡ ಸಂಪಿಗೆ ಸರವ ಮಾಜದೇ ಎನ್ನಿಂದ ಸ್ವೀಕರಿಸೊ ದೇವ 5 ಪಾತಕರಹಿತ ಹರಿ ಪಾವನರೂಪನೆ ಪ್ರೀತಿಯಿಂ ಸ್ವೀಕರಿಸೊ ಕೇತಿಕೆಯ ಸರವ ಶ್ರೀತರುಣಿ ಸತ್ಯಭಾಮೆಯರು ಕದನವಗೈದ ಪ್ರೀತಿ ಪಾರಿಜಾತ ಧರಿಸಯ್ಯ 6 ಮರುಗ ದವನಗಳಿಂದ ಸುರಹೊನ್ನೆಯನೆ ಕಟ್ಟಿ ಇರುವಂತಿಗೆಯ ಹಾರ ಹರಿಯೆ ಅರ್ಪಿಸುವೆ ಪರಿಮಳವ ಬೀರುತಿಹ ಪರಿಪರಿಯ ಮಲ್ಲಿಗೆಯ ಸರಗಳನೆ ಧರಿಸಿನ್ನು ಸಾಕಾರರೂಪ 7 ದುಂಡುಮಲ್ಲಿಗೆಯ ಮೊಗ್ಗು ಪಾಂಡವರ ಪಾಲಕಗೆ ದಂಡೆಯನೆ ಕಟ್ಟಿ ನಾ ಕೊರಳಿಗ್ಹಾಕುವೆನೊ ಚಂಡವಿಕ್ರಮ ಶಂಖ ಚಕ್ರಧಾರಿಯೆ ಪಾದ ಮಂಡೆ ಪರಿಯಂತರದಿ ನೊಡಿ ದಣಿಯುವೆನೊ8 ಸತಿ ನಿನಗಾಗಿ ಕಾಷ್ಟದಳ ಮೃತ್ತಿಕೆಯ ಸೇವಿಸುವ ಜನಕೆ ಇಷ್ಟ ಫಲವನೆ ಇತ್ತು ಕೃಷ್ಣನ್ನ ತೋರಿಸುವ ಶ್ರೇಷ್ಠ ತುಳಸಿಮಾಲೆ ಕಟ್ಟಿ ಹಾಕುವೆನೊ 9 ಕಮಲನಾಭನೆ ಕೃಷ್ಣ ಕಮಲಾಪತಿಯೆ ಸ್ವಾಮಿ ಕಮಲಪಾಣಿಯೆ ದೇವ ಕಮಲಾಕ್ಷನೆ ಕಮಲಮುಖ ನಿನ್ನ ಪದಕಮಲದಲಿ ನಲಿವಂತೆ ಕಮಲದ್ಹಾರವ ಕಟ್ಟಿ ಕೊರಳೀಗ್ಹಾಕುವೆನೋ10 ಈ ಪರಿಯ ಮಾಲೆಗಳ ನೀ ಪ್ರೀತಿಯಿಂ ಧರಿಸಿ ಪಾಪಗಳ ತರಿದೆನ್ನ ಪಾವನವಗೈಯ್ಯೊ ಆಪತ್ತು ಕಳೆವ ಶ್ರೀ ಗುರು ಕಟಾಕ್ಷದಿ ನುಡಿದೆ ಗೋಪಾಲಕೃಷ್ಣವಿಠ್ಠಲನೆ ಕೃಪೆಮಾಡೊ 11
--------------
ಅಂಬಾಬಾಯಿ
ಶ್ರವಣ ಮಂಗಳನೀವುದೊ ಎನ್ನ ಕರ್ಣಗಳಿಗಾ- ನಂದ ಕೊಡುವುದು ಶರಣ ಜನರಿಗೆ ಬಂದ ದುರಿತಗಳ್ಹರಣ ಮಾಡುವುದು 1 ಭರಣ ಭೂಷಿತನಾದ ಲಕ್ಷ್ಮೀರಮಣ ನೀಲಾ- ವರಣ ನಿನ್ನ ಝಣ ಝಣಂದಿಗೆ ನಾದ ನೂಪುರ ಚರಣಕ್ವಂದಿಸುವೆ 2 ಕಮಲನಾಳದಿ ಪುಟ್ಟಿದಾತನ ಜನನಿ ಪತಿ ಜಗಜ್ಜನಕ ನಿನ್ನ ವನಜಪಾದಕೆ ನಮಿಸುವೆನೊ ಈ ಮನವು ನಿನ್ನಲ್ಲಿ 3 ನಿಲಿಸಿದರೆ ನಾ ನಿನ್ನ ನಾಮವ ನೆನೆಸಿದರೆ ಫÀಲಫಲಿಸಿ ಬಾಹೋದು ಒಲಿಸುವನು ವೈಕುಂಠಪತಿ ನೀ ಮನಸು ಮಾಡುವರೆ 4 ಘನಮಹಿಮ ಗಾಂಧಾರಿ ಸುತರನು ಹನನ ಮಾಡಿದ ಪವನ ಪ್ರಿಯನೇ ಜನುಮ ಜನುಮದಿ ನಿನ್ನ ಬಿಡೆ ನಾ ಜಗದ ವಲ್ಲಭನೆ 5 ಪತಿ ನಿನ್ನ ಸುಂದರಾಂಗವನು ತೋರದಲೆ ಭವ ಭಂಗ ಬಿಡಸುವು- ದ್ಯಾತಕೋ ಶ್ರೀರಂಗ ಪೇಳಿನ್ನು 6 ಚಕ್ರದಂದದಿ ತಿರುಗೊ ಎನಮನ ಚಕ್ರಧಾರಿಯೆ ನಿನ್ನ ಕಾಣದೆ ಶಕ್ರಸುತನ ಸಖನೆ ದಯಮಾಡ್ಹಕ್ಕಿವಾಹನನೆ 7 ಅನ್ನದಾತನು ಇರಲುಕಾಣದೆ ಅನ್ಯರಿಗೆ ಬಾಯ್ತೆರೆಯಲ್ಯಾತಕೆ ಪನ್ನಗಾದ್ರಿಶಯನ ನೀ ಸಲಹೆನ್ನ ಶ್ರೀಹರಿಯೆ 8 ಸರ್ವಗುಣ ಸಂಪನ್ನ ಸರ್ವೋತ್ತಮನೆ ಸರ್ವ ವ್ಯಾಪಾರಗಳನು ಸರ್ವಕಾಲದಿ ನಡೆಸುತಿರುವ ಸರ್ವರಾಧಾರಿ 9 ವರಮಹಾಲಕ್ಷ್ಮೀಪತಿಯೆ ವಾರಣವರದ ನಿನ್ನ ಸುರ ವಿರಿಂಚನಾ ಹರನು ವೀಣಾ- ಪಾಣಿನಾರದ ಬರಿದೆ ನಮಿಸುವರೆ 10 ಪರಮ ಕರುಣಾಶರಧಿ ಎನ್ನ ದುರಿತಗಳ ನೀ ದೂರ ಮಾಡುವೆ ಬಿರುದು ನಿನ್ನದÀು ಬಿಡದೆ ಭೀಮೇಶಕೃಷ್ಣ ಸಲಹೆನ್ನ 11
--------------
ಹರಪನಹಳ್ಳಿಭೀಮವ್ವ