ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರತ್ನ ಪರಮ ಪ್ರಿಯ ಕರುಣಾನಿಧೆ ನಿಮ್ಮ ಶರಣು ಹೊಕ್ಕೆನು ಪೊರೆಯಬೇಕೆನ್ನ ದೊರೆಯೆ ಪ. ವರ ತಂದೆ ಮುದ್ದುಮೋಹನ ದಾಸಾರ್ಯರೆ ಪರಿಪರಿಯಿಂದ ಭಕ್ತರನು ಪೊರೆಯುವರೆ ಪರಮಾರ್ಥ ಚಂದ್ರೋದಯದ ಪ್ರಕಾಶಕರೆ ಪರಿಮಳ ಸುನಾಮದಲಿ ಸರ್ವತ್ರವ್ಯಾಪಕರೆ 1 ತರತರದ ಸುಗುಣ ಮಣಿಮಾಲೆಯಿಂ ಶೋಭಿಪರೆ ವರಶಿಷ್ಯ ರತ್ನಪದಕಗಳಿಂದಲೊಪ್ಪಿಹರೆ ಸುರರಗಣ ಮಧ್ಯದಲಿ ಪರಿಶೋಭಿಸುತಲಿಹರೆ ಮೊರೆಹೊಕ್ಕವರ ಕಾಯ್ವ ಪರಮ ಕರುಣಾಕರರೆ 2 ಕನಸಿನಲಿ ಮನಸಿನಲಿ ಕಳವಳವ ಹರಿಸುವರೆ ಮನಸಿಜಪಿತನನ್ನು ಮನದಿ ನೆನೆಯುವರೆ ಇನಕೋಟಿತೇಜ ಶ್ರೀ ಶ್ರೀನಿವಾಸನ ಕೃಪೆಗೆ ಅನುಮಾನವಿಲ್ಲದೆಲೆ ಅರ್ಹತೆಯ ಕೊಡಿಸುವರೆ 3 ಭಕ್ತರನು ಪೊರೆಯುವ ಕಾರುಣ್ಯನಿಧಿ ಎಂದು ಪಾದ ನಂಬಿರುವೆ ಭಕ್ತವತ್ಸಲ ಶೇಷಶಯನನಾ ಸೇವೆಯನು ನಿತ್ಯ ಮಾಳ್ಪಂಥ ಸೌಭಾಗ್ಯ ನೀಡುವುದು 4 ಕವಿದಿರುವ ಅಜ್ಞಾನಪರೆಯನ್ನು ಛೇದಿಸುತ ಸವಿಯಾದ ಹರಿಯ ನಾಮಾಮೃತ ಉಣಿಸಿ ಪವನನಂತರ್ಯಮಿ ಗೋಪಾಲಕೃಷ್ಣವಿಠ್ಠಲ ತವಕದಿಂದಲಿ ಪೊಳೆವ ಸುಜ್ಞಾನ ನೀಡುವುದು 5
--------------
ಅಂಬಾಬಾಯಿ
ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್