(ಧ್ರುವನು ಜನಿಸಿದಾಗಿನ ಜೋಗುಳ ಹಾಡು)
ಮುತ್ತಿನ ಸರಪಣಿ ಹಸ್ತದಿ ಪಿಡಿದು
ಮತ್ತೈದೆಯರೆಲ್ಲ ಸುತ್ತಲೂ ನೆರೆದು
ಪುತ್ರರತ್ನವ ತಂದು ತೊಟ್ಟಿಲೊಳಿಟ್ಟು
ಮತ್ತಕಾಶಿನಿಯರು ತೂಗಿದರೊಟ್ಟು ಜೋ ಜೋ 1
ಮಾರನ ಹೋಲ್ವ ಶೃಂಗಾರನೆ ಜೋ ಜೋ
ಧಾರುಣಿಪತಿ ಸುಕುಮಾರನೆ ಜೋಜೋ
ಸಾರಸನೇತ್ರಪವಿತ್ರನೆ ಜೋ ಜೋ
ಚಾರುಮೋಹನ ಶುಭಗಾತ್ರನೆ ಜೋಜೋ ಜೋಜೋ 2
ಜೋ ಜೋ ಮಕ್ಕಳ ಕಂಠಾಭರಣ
ಜೋ ಜೋ ಸುರತರುಪಲ್ಲವಚರಣ
ಜೋ ಜೋ ಸಜ್ಜನ ಹೃದಯಾನಂದ
ಜೋ ಜೋ ಉತ್ತಾನಪಾದನ ಕಂದ ಜೋ ಜೋ3
ತೃವಿ ತೃವಿ ಲಕ್ಷ್ಮೀನಾರಾಯಣ ಶರಣ
ತೃವಿ ತೃವಿ ಪರಿಪೂರ್ಣ ಸದ್ಗುಣಾಭರಣ
ತೃವಿ ತೃವಿ ಸುಸ್ಮಿತವದನವಿಲಾಸ
ತೃವಿ ತೃವಿ ಚಂದಿರಕಿರಣ ಪ್ರಕಾಶ ಜೋ ಜೋ 4