ಶ್ಯಾಮಸುಂದರ ಶ್ರೀಮಾಧವ
ಕಾಮಿಸುವಳಾ ಕಾಮಿನಿಯು ಪ.
ಭಾಮಾಮಣಿಯು ನಿನ್ನನೀಕ್ಷಿಸದೆ
ಯಾಮಯಾಮಕೆ ತಾಮಸಗೊಂಬಳು ಅ.ಪ.
ಚಂದನಾದಿ ಸೌಗಂಧಕುಸುಮ ವಿಷ-
ದಂದವೆಣಿಸುವಳು ಚಂದ್ರಮುಖಿ
ಮಂದಾನಿಲ ಮಕರಂದ ಪಾನರಸ-
ವೊಂದನೊಲ್ಲಳ ಪ್ರಿಯಸಖಿ
ನಂದನ ಕಂದನೆ ವಂದನೆ ವಲ್ಲಭಗೈವಳು 1
ಹಾರ ಹೀರ ಬಂಗಾರ ಭೂಷಣವ
ಭಾರವೆಂದು ಶೃಂಗರಿಸಳು
ಕೀರಕೀಕಿ ಪಿಕ ಚೀರುಸ್ವನ ಶರ-
ಧಾರೆಯೆಂದು ತಾ ಸೈರಿಸಳು
ಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು 2
ಮೀನಧ್ವಜನುರುಬಾಣದುರುಬೆಗೆ
ಕ್ಷೀಣವಾಗಿಹಳು ಮೀನಾಕ್ಷಿ
ಭಾನುತೇಜ ಲಕ್ಷ್ಮೀನಾರಾಯಣ
ಧ್ಯಾನಿಸುವಳು ನಿನ್ನ ಪ್ರಾಣಸಖಿ
ಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು 3