ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ
ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ
ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು
ಮರೆವೆಯನು ಪರಹರಿಸದಿರೆ ನಿನ್ನ ತಪ್ಪು
ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು
ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು 1
ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು
ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು
ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು
ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು 2
ನಾಶವೊಂದೋ ಮಹಹೇಸಿಸಂಸಾರದ
ವಾಸನೆಯ ಬಿಡದಿರೆ ಎನ್ನ ಘನತಪ್ಪು
ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ
ಸಾಸಿರಪಾಲಿಗೆ ನಿನ್ನ ಮಹತಪ್ಪು 3