ಹರಿನಾಮ ಜಪಕಿನ್ನು ಸರಿಯಾದುದಿಲ್ಲ
ಸರಸಿಜಾಸನಿದರ ಸಾರವನು ಬಲ್ಲ ಪ.
ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ
ನಡುನೀರೊಳಗೆ ಮುಳುಗಲುಡುಪವಹದು
ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ
ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1
ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ
ಮಾರಿ ಮೊದಲಾದಭಯಕಾರಿಗಳನು
ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ
ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2
ಆವ ಕಾಲಕು ಸುಖವನೀವ ಶೇಷ ಗಿರೀಶ
ಶ್ರೀವರನ ಸರ್ವತ್ರ ಸ್ಮರಿಸಿರೆಂದು
ದೇವಋಷಿಯೆಂದುದನು ದಿಟವೆನುತ ನಂಬುವರ
ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3