ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ
ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ.
ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು
ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ
ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು
ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1
ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು
ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ
ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು.
ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2
ರುಧಿರ ಪಾನವ ಮಾಡಿತು
ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು
ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ
ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3
ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು
ತರಳನೊಬ್ಬನ ಕೂಡೆ ತಾನೂ ಆಟವನಾಡಿತು
ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4
ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು
ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು
ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು
ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5