ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ
ಈ ರೀತಿಯನುವ ಮಾಡಿದೆಯ ಸ್ವಾಮಿ ಪ
ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ
ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ
ದಾರಿಯನು ತೋರಲೈತಂದ ಶ್ರೀವೈಷ್ಣವನು
ಸೇರಿಸಿದ ನೀಯಡವಿಯಸ್ವಾಮಿ
ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ
ಸೇರುವೆನು ಈ ಗಿರಿಯೊಳೂ ಸ್ವಾಮಿ 1
ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು
ಕಾರಣಬಂದೆನಯ್ಯ ಸ್ವಾಮಿ
ಭೂರಮಣ ತ್ರಿಭುವನಾಧಾರ ನೀ ನಲ್ಲದಿ
ನ್ನಾರು ಕಾವರೆನ್ನನು ಸ್ವಾಮಿ 2
ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ
ರಿಡುತಲಿವೆ ಭಕ್ಷಿಸುವಡೇ ಸ್ವಾಮಿ
ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ
ಕಡೆಗಾಲವಾಯಿತೆಲ್ಲೋ ಸ್ವಾಮಿ 3
ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ
ಬಡುವುದಕೆ ಗುರಿಯಾದೆನೇ ಸ್ವಾಮಿ
ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ
ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ 4
ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ
ಸಂದು ಬಸವಳಿದೆನೆಲೋ ಸ್ವಾಮಿ
ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ
ವಿಂದಾಕ್ಷ ಸುಮ್ಮನಿಹರೇ ಸ್ವಾಮೀ 5
ಎಂದೆಂದು ಮಾತನಾಡುವನಾಥರಕ್ಷಕನೆ
ಬಂದುದೀಗೇನು ಸಿರಿಯು ನಿನಗೇ
ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು
ತಂದೆ ವೈಕುಂಠ ರಮಣಾ ಸ್ವಾಮೀ 6