ದಾಸನಾದವನಿಗೆ ಭವಭೀತಿಯುಂಟೆ
ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ
ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ
ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ
ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ
ತನುಮೋಹ ಬಿಟ್ಟವಗೆ ಮರಣದ ಭಯವೆ 1
ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ
ಸಂದೇಹವಳಿದವಗೆ ಕರ್ಮಗಳ ಭಯವೆ
ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ
ಸಿಂಧುಶಯನನರ್ಚಕಗೆ ಕಾಲನ ಭಯವೆ 2
ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ
ಪರವ ಸಾಧಿಪನಿಗೆ ಕಷ್ಟಗಳ ಭಯವೆ
ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ
ಶರಣರೊಳಾಡುವಗೆ ನರಕಂದಜಿಕೆಯೆ 3
ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ
ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ
ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ
ಸತ್ಯರೊಳಾಡುವಗೆ ಮೃತ್ಯುವಿನ ಭಯವೆ 4
ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ
ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ
ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ
ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ 5