ದೇವದೇವನೆ ಓವುದೆಮ್ಮನು ಶ್ರೀವಧೂವರನೇ
ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ.
ನೀಲಮೇಘಶ್ಯಾಮ ರಮಾಲೋಲ ಪಾಲಿಸೈ
ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ 1
ಭೋಗಿಶಯನ ಯೋಗಗಮ್ಯ ಸಾಗರಸ್ಥಿತ
ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ 2
ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ
ಎಳೆಯರಾವು ಚಲವನರಿಯೆವು ಒಲವನೆರೆವೆವೈ3
ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ
ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ4