ಸತತ ಹರಿಯ ನಾಮವನ್ನು ಯತುನದಿಂದ ನುಡಿವ ನರನು ಪ
ಅತಿತ್ವರೆಯಲಿ ಸರ್ವಕಾರ್ಯ ಸಿದ್ಧಿಪೊಂದುವ ಅ.ಪ
ದುರ್ಗಮಾರ್ಗ ಪಿಡಿದು ಕುರುಕ್ಷೇತ್ರ ಪಯಣವೇಕೆ ಜಿಹ್ವ
ಯಗ್ರದಲ್ಲಿ ಹರಿಯನಾಮವಿರುವ ನರನಿಗೆ 1
ಮೂರು ಲೋಕಗಳಲಿ ಇರುವ ಹೇರು ಪುಣ್ಯಲಾಭ ಒಂದು
ಸಾರಿ ಹರಿಯನಾಮದಿಂದ ಸಾಧ್ಯವಿರುವುದು 2
ಉಚ್ಚರಿಸಲು ಹರಿ ಎಂದೆರಡು ಅಕ್ಷರಗಳ ನರನು ಕ್ಷಣದಿ
ಮೋಕ್ಷ ಪಾಥೇಯವನ್ನು ಸಿದ್ಧಗೊಳಿಸುವ 3
ಹರಿಯನಾಮ ಒಂದೇ ಎನಗೆ ಸರ್ವವಿಧದ ಜೀವನವು
ಹರಿಯನಾಮ ಹೊರತು ಕಲಿಯೊಳರಿಯೆ ಗತಿಯನು 4
ಹರಿಯೇ ಗಂಗಾ ಹರಿಯೇ ಗಯಾ ಹರಿಯೇ ಕಾಶಿ ಸೇತು ಪುಷ್ಕರ
ಹರಿಯ ನಾಮ ಜಿಹ್ವೆಯಲ್ಲಿ ಇರುವ ನರನಿಗೆ 5
ನೂಕಿ ಕಾಮಕ್ರೋಧಗಳನು ಏಕವಾರ ಹರಿಯೆಂದೆನಲು
ನಾಕುವೇದಗಳನು ಓದಲೇಕೆ ಮನುಜನು 6
ಅಶ್ವಮೇಧ ಪುರುಷಮೇಧ ಯಜ್ಞಫಲವು ಲಬ್ಧವಿಹುದು
ವಿಶ್ವಾಸದಿ ಹರಿಯನಾಮ ನುಡಿದ ನರನಿಗೆ 7
ಕೋಟಿ ಶತ ಗೋದಾನ ಕನ್ಯಾಭೂಮಿ ದಶಶತಕಗಳ ದಾನ
ಸಾಟಿ ಹರಿಯನಾಮ ನುಡಿಯು ಭಕ್ತಜನರಿಗೆ 8
ಸಪ್ತ ಕೋಟಿ ಮಹಾಮಂತ್ರ ಚಿತ್ತ ವಿಭ್ರಮ ಕಾರಕಗಳು
ಯುಕ್ತಿಯೊಂದೇ ಹರಿಯನಾಮದಕ್ಷರದ್ವಯ 9
ಮುನ್ನ ವರ ಪ್ರಹ್ಲಾದ ನುಡಿದ ಘನ್ನನಾಮ ಪಠನದಿಂದ ಪ್ರ
ಸನ್ನ ಹರಿಯು ತನ್ನ ಪದವನೀವ ಮುದದಲಿ 10