ವನಜನಾಭನ ಅಡಿಯು ಮನುಜಾನೀಪತಿಯು ಪ
ಅನುದಿನದೊಳೈತಂದು
ಘನಸಿಂಧುಶಯನನು ಮಿಂದು ದ್ವಾದಶಿಯೊಳಿಂದು
ಸನುಮತದಿಯರ್ಪಿಸಿದ ಎಡೆಯನು
ಘನತರದ ಸಂಭ್ರಮದಿ ಭುಂಜಿಸಿ
ಜನಿಸಿ ಭಕುತಿಯನೆನ್ನ ಮನದಿ ಪ್ರ-
ಸನ್ನನಾದನು ಎನಿತು ಪೇಳಲಿ 1
ರಕ್ಕಸರಿಗತಿ ವೈರಿ
ಮಿಕ್ಕಾನತರ ಸಹಕಾರಿ ಶ್ರೀಹರಿ ಮುರಾರಿ
ತಕ್ಕ ವಿಜಯಗೆ ಸಾರಥ್ಯಾಗಿ
ಇಕ್ಕರಿಸಿ ಕುರುಪತೀಯನನ್ವಯ
ಅಕ್ಕರದಿ ದ್ರುಪದಸುತೆಯ ಸಲಹಿ
ರುಕ್ಮಿಣೀಶನು ರಕ್ಷಿಪನು ಸಲೆ 2
ಕರಿವರದ ಶಿರಿಲೋಲಾ
ಪರಮಾತ್ಮ ಶ್ರೀಘನಲೀಲಾ
ಜರರಹಿತ ವಿಮಲಾ
ನಿರುತದೀಪರಿ ಸ್ಮರಿಪ ನರನಿಗೆ
ಕರುಣಸಾಗರನಾಗಿ ಸುರವರ
ತ್ವರಿತದೀವನು ಹರಸಿ ವರಗಳ
ಹರಗೊಲಿದ ನರಸಿಂಹವಿಠಲಾ 3