ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ
ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ
ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ-
ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ
ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ
ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು
ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ
ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1
ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ
ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು
ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ-
ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2
ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ
ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ
ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು
ನಾ ಧೇನಿಸಲರಿಯೆ ಹರಿಯೇ 3
ಪ್ರಾಣಾಯಾಮವ ಕ್ರಮವು ರೇಚಕ ಪೂರಕವು
ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ
ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ
ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4
ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು
ವಿಷಮವಾಗಿಹುದಯ್ಯ ಮತ್ಸಾಧನ
ಪ್ರತ್ಯಾಹಾರ ಸಾಧನವಿಲ್ಲ
ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5
ಧಾರಣೋಪಾಯದೊಳು ಅಣುಮಾತ್ರ ನಾನರಿಯೆ
ನರಕ್ರಿಮಿಯಾಗಿ ನಾ ಧರೆಯೊಳುಳಿದೆ
ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ
ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6
ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ
ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ
ಘನಸಮಾಧಿಯೊಳ್ ಪರಿವಿಲ್ಲದಲೆ
ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7
ಶುದ್ಧವಾದ ದ್ವೈತತ್ರಯ ತಿಳಿಯದಲೆ
ಮುಗ್ಧನಾಗಿಹೆ ನಾನಪರಿಶುದ್ಧನೊ
ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ
ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8
ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ
ಹರಿಯೇ ಬಿಂಬಕ್ರಿಯವ ನಾನರಿಯದೇ
ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ
ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9