ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಲಿಲ್ಲವೆನುತ ನೀ ಹೊರಗಿಕ್ಕಬೇಡ ಉರಗಾದ್ರಿವಾಸ ಶ್ರೀ ವೆಂಕಟೇಶ ಪ ಕಾಸಿಲ್ಲ ಕೈಯೊಳಗೆ ಲೇಸಿಲ್ಲ ಮನೆಯೊಳಗೆ ವಾಸಿತಪ್ಪಿಯೆ ಬಹಳ ಬೇಸತ್ತೆನು ಈಸು ಪ್ರಯಾಸ ನಿನ್ನ ದಾಸಗೊದಗಿದ ಮೇಲೆ ದೋಷವೆನ್ನಲ್ಲಿಲ್ಲ ಶೇಷಾದ್ರಿವಾಸ 1 ಗೆಲುವಿಲ್ಲ ಮನದೊಳಗೆ ಬಲವಿಲ್ಲ ಕಾಯದೊಳು ಹೊಲಬುದಪ್ಪಿಯೆ ಬಹಳ ಸುಲಿವಾದುದು ಫಲವೇನು ಇದರೊಳಗೆ ಕೆಲಸವೇನಿಹುದಿಲ್ಲ್ಲಿ ಸುಲಭದೊಳು ಬೇರೊಂದು ಪರಿಯ ನೋಡಯ್ಯ 2 ಕತ್ತಲೆಯ ರಾಜ್ಯವನು ಆದಿತ್ಯನಾಳುವ ತೆರದಿ ಸುತ್ತಗಳನೆಲ್ಲವನು ಕಿತ್ತು ಹಾರಿಸಿಯೆನ್ನ ಹತ್ತಿರದಿ ಮೈದೋರು ಭಕ್ತವತ್ಸಲನೆ 3 ಹಿರಿಯೊಳು ಆರ್ಜಿಸಿದ ಗೃಹಕೃತ್ಯವೆಂಬುದಿದು ಕೊರಳಡಿಗೆ ಸಿಲುಕಿರ್ದ ಸೆರೆಯಾಯಿತೊ ಹರುಷವಿಲ್ಲಿದರೊಳಗೆ ಬರುವ ಗತಿಯನು ಕಾಣೆ ದರುಶನಕೆ ಬಗೆದೋರು ದೊರೆ ವೆಂಕಟೇಶ 4 ಮಾತು ತಪ್ಪಿತು ಎಂದು ಭೀತಿಗಿಕ್ಕಲುಬೇಡ ಸೋತುದೈ ಕೈಯೆನಗತೀತ ಮಹಿಮ ಕಾತುರವು ಮನದೊಳಗೆ ಕಾಣಬೇಕೆಂದೆಂಬ ಪ್ರೀತಿಯಾಗಿದೆ ಜಗನ್ನಾಥ ನಿನ್ನೆಡೆಗೆ 5 ಒಂದು ಪರಿಯನು ನೀನು ತಂದು ತೋರಿದರೀಗ ಇಂದೆ ನಾನೇಳುವೆನು ಮಂದಿವಾಳದಲಿ ಚಂದದಲಿ ಮಡದಿ ಮಕ್ಕಳ ಸಹ ಕರಕೊಂಡು ಬಂದು ನೋಳ್ಪೆವು ನಿನ್ನ ಆನಂದ ಮೂರುತಿಯ 6 ಅಣಿಮಾಡಿ ನೀನೆನಗೆ ಮನದಣಿವ ತೆರನಂತೆ ಕ್ಷಣವಾದ ಕೆಲಸಗಳು ನಿನಗೆ ಘನವಲ್ಲ ತನಿರಸವನೆನಗೀಯೊ ಜನ ಮೆಚ್ಚುವಂತೆ 7
--------------
ವರಹತಿಮ್ಮಪ್ಪ
ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ ಘನವಲ್ಲ ನಿನಗಿದು ತೆರೆದ ಬೀಗ ಜೋಡಿಸುವುದು ಪ ವದನದಿಂದಲಿ ನಿನ್ನ ಮಹಿಮೆ ಪೊಗಳಲರಿಯದೆ ಸದನದಿ ಅನ್ಯರ ಪಾಡುತ್ತಿದ್ದೆನೇನೋ 1 ಪಾಡದಿದ್ದರೆ ನಾನೊಬ್ಬ ನೋಡಿ ಬಂದದ್ದೇನೊ ನಿನಗೆ ಬೇಡಿಕೊಂಬೆನೊ ಬಾಯ ಬೀಗ ತÉಗೆಸೊ ಹರಿಯೆ 2 ವೇದ ಪೊಗಳಲರಿಯದ ವಿಜಯ ರಾಮಚಂದ್ರವಿಠಲನ್ನ ಮೋದಮಯ ದೇವ 3
--------------
ವಿಜಯ ರಾಮಚಂದ್ರವಿಠಲ
ಜೋಜೋ ಶ್ರೀ ಗೋಪಾಲಕೃಷ್ಣ ಮೂರುತಿಯೆ ಪತಿ ಲೋಕ ದೊರೆಯೆ ಜೋಜೋ ಈ ಲೋಕದೊಳು ನಿನಗಿನ್ನು ಸರಿಯೆ ಜೋಜೋ ಶ್ರೀ ಗುರುಕರಾರ್ಚಿತದಿ ಬಂದ್ಹರಿಯೆ ಪ. ತಂದೆ ಮುದ್ದುಮೋಹನರು ಕೊಟ್ಟ ಅಂಕಿತದಿ ಪೊಂದಿದ್ದ ರೂಪ ಗ್ರಹದಲ್ಲಿ ಹೊಂದಿ ಮುಂದೆಂಟು ವತ್ಸರಕೆ ಎನ್ನೊಡನೆ ಬಂದಿ ತಂದೆ ಮುದ್ದುಮೋಹನರ ಕರಸ್ಪರ್ಶ ಪೊಂದಿ 1 ನಮ್ಮ ಹಿರಿಯರ ಪೂಜೆ ಒಮ್ಮೊಮ್ಮೆ ಎಂದು ಒಮ್ಮೆ ದುರುಳನು ಮುಟ್ಟೆ ಮಲಿನಾದೆನೆಂದು ನಮ್ಮ ಗುರು ಕರಸ್ಪರ್ಶದಿಂ ಪುನಃ ಬಂದು ಪತಿ ಎನ್ನ ಕರಪೂಜೆ ಬೇಕೆಂದು 2 ಘನ್ನ ಗುಣರು ನಿನ್ನ ಪೂಜಿಸಿ ಪೋಗಲಂದು ಮನೆ ಪೆಟ್ಟಿಗೆಯೊಳ್ ಸುಮ್ಮನಿರಲಾರೆನೆಂದು ಮನಕೆ ಪ್ರೇರಿಸೆ ದುರುಳರಿಗೆ ಕದ್ದು ಒಯ್ದು ಘನ ಮೂರ್ತಿಗಳು ಪೋಗೆ ನೀನೊಬ್ಬ ಬಂದು 3 ಬಹುದಿವಸ ಮಲಿನವಾಗಿರುತಿರಲು ನೀನು ಮಹಮಹಿಮೆ ಅರಿಯಲಿಲ್ಲಾಗ ನಾನಿನ್ನು ಅಹಹ ನಮ್ಮ ಗುರುಗಳೆರೆಯಲು ಜ್ಞಾನವನ್ನು ಮಹಿಯೊಳೆನ್ನ ಪೂಜೆಯನು ಬಯಸಿದೆಯೊ ನೀನು 4 ಮನದಲ್ಲಿ ಪ್ರೇರಿಸಲು ಘನವಲ್ಲವೆಂದು ಕನಸಿನಲಿ ಎನ್ನ ಹಸ್ತದೊಳ್ ಬಂದು ನಿಂದು ಸನುಮತದಿ ಹರುಷದಲಿ ನಿನ್ನ ನಾ ತಂದು ಘನ ಮಹಿಮ ಗುರುಗಳಿಗೆ ಒಪ್ಪಿಸಲು ಅಂದು 5 ಅಂತರಾತ್ಮನ ಗುರುವು ವಿಗ್ರಹದೊಳಿಟ್ಟು ಸಂತೋಷದಿಂದ ಮನಮುಟ್ಟಿ ಕೊಡಲಷ್ಟು ಅಂತಾಯ್ತು ಮಲಿನ ಕುಂದಿತು ತೇಜವೆಷ್ಟು ನಿಂತೆನ್ನ ಕೈಲಿ ಪೂಜೆಯಗೊಂಬ ಗುಟ್ಟು 6 ದಿನದಿನಕೆ ಭಜನೆ ಪೂಜೆಯನೆಗೊಂಬ ಚಂದ ಘನಭಕ್ತರನು ಪೊರೆವ ಬಿರುದು ಆನಂದ ಮುನಿಜನರ ಮೋಹಕನೆ ಸಚ್ಚಿದಾನಂದ ಎನಗೊಲಿದೆ ಗೋಪಾಲಕೃಷ್ಣ ಗೋವಿಂದ 7 ರಮೆ ಬ್ರಹ್ಮ ಸುರರಿಗೆ ಸರಿ ಪೂಜಿಸುವೆನೆ ಕಮಲಾಕ್ಷ ಅಣು ನಾನು ನಿನ್ನ ಒಲಿಸುವೆನೆ ರಮಣೀಯವಾದ ವಸ್ತುಗಳ ನಾ ತಹೆನೆ ಕ್ಷಮಿಸು ನಿನ್ನ ದಾಸಿ ನನ್ನಪರಾಧಗಳನೆ 8 ಅಂತರಂಗದಲಿಪ್ಪ ಬಿಂಬ ಮೂರುತಿಯೆ ನಿಂತು ಈ ವಿಗ್ರಹದಿ ಈ ರೀತಿ ಮೆರೆಯೆ ಸಂತೋಷ ನೋಳ್ಪರಿಗೆ ಕೊಡು ಭಕ್ತಿ ಹರಿಯೆ ಕಂತುಪಿತ ಕಮಲಾಕ್ಷ ಕಾಯೊ ಸಿರಿದೊರೆಯೆ 9 ಪೂಜ್ಯಪೂಜಕನೆಂದು ಪೂಜೆ ಮಾಡುವೆನೊ ಮೂರ್ಜಗತ್ಪತಿ ನಿನ್ನ ಲಾಲಿ ಪಾಡುವೆನೊ ಪೂಜ್ಯ ಶ್ರೀ ಗೋಪಾಲಕೃಷ್ಣವಿಠ್ಠಲ ನೀನು ಗೋಜು ಬೇಡನ್ಯರದು ಪೊರೆಯೊ ದಾಸರನು 10
--------------
ಅಂಬಾಬಾಯಿ
ಸುಮ್ಮನೆ ಕಾಲವ ಕಳೆವರೆ - ಯಮ - |ಧರ್ಮರಾಯನ ದೂತರೆಳೆಯರೆ ಪ.ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
--------------
ಪುರಂದರದಾಸರು