ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1 ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2 ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಶಿವಾತ್ಮ ಲಿಂಗವೆನ್ನ ಕರತಳಾಮಳಕವಾಗಿ ಶರೀರದೊಳಗೆ ಬೆಳಗುವುದು ಶ್ರೀ ಗುರು ವಚನದಿ ಕಂಡೆನು ಪ ಏನು ಬೇಕು ಎನಗೆ ಇನ್ನು ಮಾನವತ್ವ ಅಳಿದು ಸರ್ವ ತಾನೆ ಅಂಗದಿರವೆಯಾಗಿ ಸ್ವಾನುಭವದ ಸುಖದೊಳು ಧ್ಯಾನಿಸುತ್ತ ಒಳಹೊರಗಿಹ ಭಾನುಕೋಟಿ ತೇಜವನ್ನು ತೋರಿದಾ ಪರಶಿವಾತ್ಮ 1 ವಿಂಗಡಿಸಿದ ಷಟ್‍ಸ್ಥಳಗಳ ಸಂಗವಿಡಿದು ಚರಿಸುತ್ತಿರಲು ಲಿಂಗವೇ ಸರ್ವಾಂಗವಾಗಿ ಇಂಗಿತವ ತಿಳಿದವನು ಮಂಗಲಾತ್ಮನಾದ ಶ್ರೀಗುರು ಪುಂಗನು ಎನಗೊಲಿದು ದಿವ್ಯ ಕಂಗೊಳಿತ್ತುಧರಣಿ ಗಗನ ಡಂಗದ ಘನಲಿಂಗವಾ ಪರಶಿವಾತ್ಮ 2 ಒಂದರಂಕೆಯನ್ನು ಬರೆದು ಹೊಂದಿದಷ್ಟು ಲೆಖ್ಖ ಬೆಳೆವ ಅಂದದಂತೆ ಉಳಿದು ಅಳಿದು ನಿಂದ ನಿಜದ ನಿಲುವಿಗೆ ಬಂಧು ವಿಮಲಾನಂದ ಶ್ರೀಗುರು ಬಂದು ಎನ್ನ ಹೃದಯದಿ ಪರಶಿವಾತ್ಮ 3
--------------
ಭಟಕಳ ಅಪ್ಪಯ್ಯ
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು