ಇನ್ಯಾತಕನುಮಾನವಯ್ಯಾ ಪ
ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ಅ.ಪ.
ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು
ವಾಸ ಏಕತ್ರದಲ್ಲಿ
ನೀ ಸಾಕ್ಷಿಯಾಗಿದ್ದು ದಾಸನಾದವಗಪ್ರ-
ಯಾಸದಿ ಫಲಗಳುಣಿಸಿ
ಲೇಶ ಘನಮಾಡಿ ಸಂತೋಷಪಡುವಾ ನಿನ್ನ
ದ್ವೇಷಿ ನಾನಲ್ಲವಯ್ಯ
ದೇಶಕಾಲಾದಿಗಳಿಗೀಶ ನೀನೆಂದರಿದು
ದಾಸನಾಗಿರುವೆನೆಂದಾಶೆ ಪುಟ್ಟಿದ ಬಳಿಕ 1
ನಿತ್ಯ ತೃಪ್ತನೆ ನಿನ್ನ ಕೃತ್ಯಕೇನೆಂಬೆನೋ
ಸತ್ಯಸಂಕಲ್ಪ ಹರಿಯೇ
ಮೃತ್ಯುಮಾರಿಗಳೆನಗೆ ಹತ್ತಿಕೊಂಡದರಿಂದ
ಸತ್ತುಪುಟ್ಟುವೆಯಿನ್ನು
ದತ್ತಕರ್ತೃತ್ವ ಬೆನ್ಹತ್ತಿಕೊಂಡದರಲ್ಲಿ
ಅತ್ಯಪರಾಧಿಯಂದತ್ತ ಮೊಗದಿರುಗದಿರು
ಭೃತ್ಯವತ್ಸಲನೆಂದಗತ್ಯ ಮನಸೋತ ಬಳಿಕ 2
ವೇದವೇದ್ಯ ಸ್ವಗತ ಭೇದವರ್ಜಿತ ಪೂರ್ಣ
ಮಾಧವ ಮಹಿದಾಸ
ಆದಿನಾರಾಯಣ ವಿನೋದ ವಿಷ್ವಕ್ಸೇನ
ಶ್ರೀದವಿಠಲಾ ನಿನ್ನ ಕ್ರೋಧ ವರರೂಪ-
ವಾದ ವಾರ್ತೆಯು ಕೇಳಿ ಧೈರ್ಯಬಿಡದಾ ಬಳಿಕಿನ್ನು 3