ಸಿರಿನರಸಿಂಹನೆ ಕರಿಗಿರಿ ನಿಲಯನೆ
ಶಿರಬಾಗಿ ನಮಿಸುವೆ ಭಕ್ತಿಯಲಿ ಪ
ಕರುಣಾಸಾಗರ ನಿನ್ನ ಚರಣ ಕಮಲದಲಿ
ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ.
ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು
ಸುಲಲಿತವಲ್ಲವು ಸಾಧನವು
ನಳಿನನಾಭನೆ ಎನ್ನ ಕುಲದೈವ ನಾರಸಿಂಹ
ಒಲಿದು ನೀನಾಗಿಯೆ ಸಲಹುವುದು 1
ಅತ್ತಿತ್ತ ಓಡುವ ಚಿತ್ತವ ನಿಲಿಸುವ
ಶಕ್ತಿಯು ಎನಗಿಲ್ಲ ಲವಲೇಶವು |
ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು
ಭಕ್ತಿಯ ಕರುಣಿಸೋ ತವ ಪಾದದಿ 2
ನೆಲದ ಮೇಲಲೆವಾಗಯಲರುಣಿ ಗಮನವು
ಹಲವು ರೀತಿಯಲಿ ವಕ್ರವಲೆ
ಘಳಿಲನೆ ತನ್ನಯ ಬಿಲದೊಳು ಪೋಪಾಗ
ಸಲೆ ನೇರವಲ್ಲವೆ ಸಿರಿವರನೇ 3
ವನ ವಿಷಯಗಳಲದಲಿ ಬರಲಾರವು
ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು
ಮನವ ನೀ ಮಡಿ ಮಾಡು ಘನಮಹಿಮ 4
ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ
ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು |
ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ
ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5