ಧನವಂತನಾದವನೆ ಘನವಂತ ಜಗದಿ
ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ
ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ
ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ
ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ
ಮನ್ನಿಪರು ಅವನೊಚನ ಘನಭಕುತಿಲಿಂದ 1
ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ
ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ
ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ
ತಿರುಗುವನು ಎಂದೆನುತ ತಿರಿಸುವರು ಹೀನ 2
ಬಂಧುಬಳಗವುಯೆಂದು ಬಂದು ಕರೆಯಲವನ
ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು
ಚಂದದಿಂದುಂಡೇವೇನೆಂದು ಜರೆವರು ಮನಕೆ
ಬಂದ ತೆರದವನ ಮನನೊಂದಳಲುವಂತೆ 3
ಹತ್ತಿರದವರಾರು ಹತ್ತಿರಕೆ ಬಾರರು
ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು
ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು
ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4
ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ
ಚರಿಸುವ ಅಧಮಜನರಿರವೇನು ಜಗದಿ
ಗರುವಿಕರ ಸಿರಿಗಿಂತ ಶರಣರ ಬಡತನವೇ
ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5