ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು