ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ
ತುಟ್ಟಿ ಮಿಸುಕಬಾರದು ನೋಡಬ್ಯಾಡ
ಇಷ್ಟರಮೇಲೆ ತಿಳಿಯದ ನಾ ಮೂಢ 1
ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ
ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ
ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ 2
ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ
ನಿಜಪದಕ ಯೋಗ್ಯಳ ಮಾಡಲಿಲ್ಲಿ
ಅಜಮಿಳನೆಷ್ಟೆಂದು ಅರಿಯಲಿಲ್ಲಿ
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ 3
ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು
ನಿಮ್ಮ ಮಾತು ಒಡಿಯದು ಉದ್ದಂಡು
ಇಮ್ಮನಾಗದಲ್ಲಿಂದ ಮನಗಂಡು
ಬ್ರಹ್ಮಾನಂದ ಕೊಂಡಾಡುವೆ ಘನನುಂಡು 4
ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ
ಇಂದು ನಾ ಕೊಡುವದೇನು ಹೇಳಯ್ಯ
ಕಂದ ಮಹಿಪತಿ ನಾ ನಿಮ್ಮ ನಿಶ್ಚಯ
ಎಂದು ಬಿಡದೆ ಸಲಹೊ ನೀ ನಮ್ಮಯ್ಯ 5