ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ
ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ
ಇನಚಂದ್ರ ಮಂಗಳಬುಧಗುರು ಭಾರ್ಗವ
ಶನಿರಾಹುಕೇತು ನವಮಹರ್ದಶನು ನೀನೆ
ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ
ದೊನರುಹ ಭುವನಂಗಳಾಳುವವ ನೀನೆ 1
ನಕ್ಷತ್ರಯೋಗಾದಿಕರಣಂಗಳು ನೀನೆ
ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ
ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ
ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ 2
ಪರಮವೇದ ಪುಣ್ಯಪುರಾಣಕಥೆ ನೀನೆ
ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ
ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ
ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ 3