ಲೋಕೈಕ ಬಂಧು ಹೇ ದಯಾಸಿಂಧು
ಜೋಕೆಮಾಡಭವ ನೀನೆನ್ನೊಳು ನಿಂದು ಪ
ಹೇಯಪ್ರಪಂಚದ ಮಾಯಾಮೋಹದಿ ಎನ್ನ
ಕಾವದೇವರು ನೀನೆ ಕೈಯ ಪಿಡಿದು ಸಲಹೊ 1
ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ
ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ
ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ
ಜವನಿಗೀಡೆನಿಸುವ ಭವಮಾಲೆ ಗೆಲಿಸು 2
ಘನದು:ಖಮಯವಾದ ಜನನಮರಣಬಾಧೆ
ರಿಣಭಾದೆ ತನುಭಾದೆಯನು ಪರಿಹರಿಸಿ
ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು
ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3