ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯಬೇಕಿನ್ನು ಪ್ರಾಣೇಶ ಅರಿಯೆನೊ ಅನ್ಯರ ಜಗದ್ವಾಸ ಪ. ಪರಿಪರಿ ಬವಣೆಯ ಪರಿಹಾರಗೈಸುತ ತ್ವರಿತದಿ ಸಲಹೊ ಭಾರತಿಗೀಶ ಅ.ಪ. ಅನ್ನವಸನಗಳಿಗೆ ಅಲ್ಪರ ತೆರದೊಳು ಬನ್ನಬಡುತಲಿರಲು ನಿನ್ನ ಪಾದವ ನಂಬಿ ನೀ ಗತಿ ಎನುತಿರೆ ಮನ್ನಿಸಿದ ಮಹಿಮ ನಿಸ್ಸೀಮ 1 ಮನದಿ ಬಹುನೊಂದು ನಿನ್ನ ಘನತೇನೆಂದು ಅನುದಿನ ಕಾಯೊ ಎಂದು ಎನುತಿರೆ ಸ್ವಪ್ನದಿ ಹನುಮ ನಿನ್ನಭಯ ಹಸ್ತ ವನೆ ಶಿರದಿ ಇಟ್ಟೆ ಶ್ರೇಷ್ಠನೆ 2 ಉಭಯ ಹಸ್ತವು ಎನ್ನ ಶಿರದ ಮ್ಯಾಲಿಡುತಲಿ ಅಭಯ ಕೊಡುತಲಿರಲು ನಿರ್ಭಯದಿಂದ ನಾ ನಿನ್ನ ಭಜಿಪೆನಯ್ಯ ಶುಭಗುಣನಿಲಯ ಜೀಯಾ 3 ಹನುಮ ಭೀಮಾನಂದ ಮುನಿಯಾಗಿ ಜಗದಲಿ ಹನನಗೈಯುತ ದನುಜರ ವನಜಾಕ್ಷ ಹರಿಯನು ಘನವಾಗಿ ಸೇವಿಸಿ ಅನುದಿನದಲಿ ಕಾಯ್ವೆ ಸುಜನರ4 ಶ್ವಾಸಜಪವ ಮಾಡಿ ರಾಶಿ ಜೀವರ ಕಾಯ್ವೆ ಶ್ವಾಸ ನಿಯಾಮಕನೆ ಶ್ರೀಶ ಶ್ರೀ ಗೋಪಾಲಕೃಷ್ಣವಿಠ್ಠಲನಿಗೆ ಕೂಸು ಎಂದೆನಿಸಿರುವೆ ನೀ ಕಾವೆ 5
--------------
ಅಂಬಾಬಾಯಿ