ಮಾರಜನಕ ನಂಬಿದೆ ನಿನ್ನ
ಪಾರುಮಾಡೆನ್ನ ಪರಮಪಾವನ್ನ ಪ
ಮೀರಿತು ಭವಬಾಧೆ ಸೈರಿಸೆನಿನ್ನು
ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ
ದುಷ್ಟಸಂಸಾರಸಾಗರದೊಳು
ಕೆಟ್ಟ ನಿಂದೆಗಳೆಂಬ ಘನತೆರಿಗಳು
ಹುಟ್ಟಿ ಏಳುತಲಿಹವು ಸಾಲಿಗೆ ಸಾಲು
ಬೆಟ್ಟದಂತೆ ಮಹ ಭೀಕರದೊಳು
ಎಷ್ಟಂತ ಈಸಬೇಕಿನ್ನಿದರೊಳು
ಸೃಷ್ಟಿಕರ್ತ ನೀನೆ ಮೊರೆ ದಯದೊಳು 1
ವಾಸನ್ಹಿಡಿದು ಸೆಳೆದುನುಂಗ್ವವೈದಾರು
ಮೋಸ ಜಲಚರಗಳ ಮೀರಿದ ತೊಡರು
ಆಸೆಯೆಂಬ ಮಹ ಸೆಳವಿನ ಜೋರು
ಸುಳಿ ಮಡುವು ಸಾವಿರಾರು
ಈಸುವುದು ಮುಂದಕ್ಕೆ ಅಗದು ಮಾರು
ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2
ಇಂತು ಭವದ ಸಾಗರವನ್ನು
ಎಂತು ದಾಟಿ ನಾ ಪಾರಾಗುವೆನು
ನಿಂತುನೋಡಲು ಅಂಜಿ ಮನಸಿಗೆ ಇನ್ನು
ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು
ಚಿಂತಾಯಕ ಭಕ್ತ ತೀವ್ರಬಂದಿನ್ನು
ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3