ಕಾಸನಿತ್ತಿರಿ ಭರದಲಿ ಹಾಗದ ಕಾಸನಿತ್ತಿರಿ ಭರದಲಿ ಪ.
ವಾಸುದೇವನ ದಯೆಯೆ ಸಾಕು
ಕಾಸುಬೇಡಿದವರಲ್ಲ ನಾವ್ ಕೃಪಣರ ಕಾಸಮುಟ್ಟುವರಲ್ಲ ನಾವ್ ಅ.ಪ
ಘನತೆಯೊಂದಿಹ ಧನಿಕರೆಂದು ಗಣಿಸಿಸಾರಿದೆವಿಲ್ಲಿಗೆ
ಘನತೆಗೊಪ್ಪುವ ಬಗೆಯ ತೋರದೆ
ಧನದ ಮೋಹದಿ ಮೆರೆದಿರೆ ನೀವ್
ಅಣುಗಿಯರೋಳ್ ಮುಳಿದಿರೇ 1
ಮಂದಿಯಿದಿರೋಳ್ ಮೌನದಿಂ ನೀ
ವಿಂದು ಲೋಭದ ಮಂತ್ರದಿಂ
ತಂದೆ ನಿಮ್ಮೀ ಒಂದು ಹಣವನು ಕೈಗೊಂಡು ನೀವೇ ನಲಿಯಿರಿ
ಬಂಧು ಮಿತ್ರರನೊಲಿಸಿರಿ 2
ಭಳಿರೆ ನೀವೌದಾರ್ಯಗುಣದೊಳು ಬಲಿದರೆನ್ನಿಸಿ ಮೆರೆದಿರೆ
ಜಲಜಲೋಚನ ಶೇಷಶೈಲನಿವಾಸನೊಲವಿಂ ಸಂತತಂ
ನಲಿದು ಸುಖಿಸಿರಿ ಸಂತತಂ 3